ಬೆಂಗಳೂರು: ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಗೆ ಧಾರವಾಡದಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕೃತ ಚಾಲನೆ ನೀಡಿದರು. ಪುನೀತ್ ರಾಜಕುಮಾರ್ ಅವರನ್ನ ನೆನಪಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್ ಅವರು, ಜನರ ಜೀವ ಉಳಿಸುವ ಇಂಥಹ ಕಾರ್ಯಕ್ರಮಗಳಿಗೆ ಪುನೀತ್ ರಾಜಕುಮಾರ್ ಅವರು ಮೇಲಿಂದಲೇ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
ಹಠಾತ್ ಹೃದಯಾಘತಗಳನ್ನ ತಡೆಯಲು ಈ ಯೋಜನೆ ಮಹತ್ವದ್ದಾಗಿದೆ. ಯಾರಿಗೇ ಎದುನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯೆ ಮಾಡದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸಿಜಿ ಮಾಡಿಸಿಕೊಳ್ಳಿ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಹಠಾತ್ ಹೃದಯಘಾತ ಆಗದಂತೆ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೇಸ್ ಅನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತವಾಗಿ ಪಡೆಯಬಹುದಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆಯವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಏನಿದು ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ
ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, 71 ತಾಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 86 ಸರ್ಕಾರಿ ಆಸ್ಪತ್ರೆಗಳನ್ನ ಸ್ಪೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರದಂತೆ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನ ಹಬ್ ಕೇಂದ್ರಗಳನ್ನಾಗಿ ರಚಿಸಲಾಗಿದೆ. ಎದೆನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ 6 ನಿಮಿಷದೊಳಗೆ ಅವರ ಕಂಡಿಷನ್ ಕ್ರಿಟಕಲ್ ಹಂತದಲ್ಲಿದೆಯೋ ಇಲ್ಲವೋ ಎಂಬುದನ್ನ AI ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾಗುವುದು. Tricog ಸಂಸ್ಥೆಯವರ AI ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ ನಡೆಸಿ, ಎದೆನೋವು ಕಾಣಿಸಿಕೊಂಡವರ ಇಸಿಜಿ ಪರೀಕ್ಷೆಯಲ್ಲಿ ತೀವ್ರ ಹೃದಯಾಘಾತವಾಗುವ ಮೂನ್ಸೂಚನೆಯನ್ನ ನೀಡುತ್ತಾರೆ. ಕ್ರಿಟಿಕಲ್ ಎಂದು ಖಚಿತವಾದ ತಕ್ಷಣವೇ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅನ್ನ ಸ್ಪೋಕ್ ಕೇಂದ್ರಗಳಾದ ತಾಲೂಕು ಆಸ್ಪತ್ರೆಯಲ್ಲೇ ನೀಡಲಾಗುವುದು. ಇದರಿಂದ ಹಠಾತ್ ಹೃದಯಾಘಾತವನ್ನ ತಡೆಯುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾದುನಿಕ ಅಂಬುಲೆನ್ಸ್ ನಲ್ಲಿ ಹಬ್ ಕೇಂದ್ರಳಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳಿಸಿಕೊಡಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿಯೂ ಉಚಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಗೋಲ್ಡನ್ ಅವರ್ ಒಳಗಡೆ ಜೀವ ಉಳಿಸುವ ಚಿಕಿತ್ಸೆ ದೊರೆಯುವಂತೆ ಯೋಜನೆ ರೂಪಿಸಲಾಗಿದೆ.