Breaking News

ಆನೆಗೊಂದಿ :ತಡರಾತ್ರಿ ರಾಮಾಯಣದ ಪ್ರಸಂಗಗಳ ಕಥನ

Spread the love

ನೆಗೊಂದಿ (ಗಂಗಾವತಿ): ವಿಶಾಲವಾದ ಇಲ್ಲಿನ ಮೈದಾನದಲ್ಲಿ ಬೆಟ್ಟಕ್ಕೆ ಅಂಟಿಕೊಂಡಂತೆಯೇ ನಿರ್ಮಾಣವಾಗಿರುವ ಭವ್ಯ ಶ್ರೀರಂಗದೇವರಾಯಲು ವೇದಿಕೆಯಲ್ಲಿ ಸೋಮವಾರ ತಡರಾತ್ರಿ ರಾಮಾಯಣದ ಪ್ರಸಂಗಗಳ ಕಥನ ಅನಾವರಣಗೊಂಡಿತು.

ಹನುಮ ಜನಿಸಿದ ನಾಡು ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಅಂಜನಾದ್ರಿ ಪ್ರದೇಶ ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.ಪಂಪಾ ಸರೋವರ, ಕಿಷ್ಕಿಂಧೆ, ಋಷಿಮುಖ ಪರ್ವತ ಹೀಗೆ ರಾಮಾಯಣಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಕಲಾವಿದರೊಂದಿಗೆ ಹಾಡುಗಳ ಮೂಲಕ ಪ್ರಸ್ತುತಪಡಿಸಿದರು.

ಸೀತೆಯನ್ನು ಹುಡುಕಿಕೊಂಡು ರಾಮ ಹಾಗೂ ಲಕ್ಷ್ಮಣ ಇಲ್ಲಿನ ಕಿಷ್ಕಿಂಧೆ ಪ್ರದೇಶಕ್ಕೆ ಬಂದಾಗ ಭೇಟಿಯಾಗುವ ಶಬರಿ, ಹನುಮಂತ, ಸೀತೆಯ ಹುಡುಕಾಟಕ್ಕೆ ನೆರವಾದ ಪ್ರಸಂಗವನ್ನು ಅವರು ಸಿನಿಮಾ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು. ಸುಮಾರು 30 ನಿಮಿಷ ನಡೆದ ಪ್ರದರ್ಶನದಲ್ಲಿ ನೂರಾರು ಕಲಾವಿದರು ಮಾಡಿದ ಮನೋಜ್ಞ ಅಭಿನಯ ಸಾವಿರಾರು ಜನರ ಕಣ್ಮನ ಸೆಳೆಯಿತು.

ಕಿಷ್ಕಿಂಧೆ ಪ್ರದೇಶದ ಸುತ್ತ ಬೆಟ್ಟ-ಗುಡ್ಡಗಳ ಸಾಲು, ನದಿಯ ವೈಭವ, ಹಸಿರು ತೋರಣದ ಸುಂದರ ದೃಶ್ಯ ಕಾವ್ಯ ಹಾಗೂ ಪ್ರಕೃತಿ ಸೌಂದರ್ಯವನ್ನು ಹಾಡಿನಲ್ಲಿ ತೋರಿಸಲಾಯಿತು. ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಹನುಮಂತ ಅವರ ಕಲಾಕೃತಿಗಳನ್ನೇ ವೇದಿಕೆಯಲ್ಲಿ ನಿರ್ಮಿಸಿದ್ದು, ಹಂಸಲೇಖ ಅವರ ಪ್ರದರ್ಶನದ ತೂಕ ಹೆಚ್ಚಿಸಿತು.

ಪ್ರದರ್ಶನ ಮುಗಿದ ಬಳಿಕ ಮಾತನಾಡಿದ ಹಂಸಲೇಖ ಅವರು, ‘ಸುದೀರ್ಘವಾದ ರಾಮಾಯಣದ ಬಹುಮುಖ್ಯ ಪ್ರಸಂಗವನ್ನು ಕೇವಲ ಎರಡು ದಿನಗಳಲ್ಲಿ ಕಠಿಣವಾಗಿ ಅಭ್ಯಾಸ ಮಾಡಿದ ನಮ್ಮ ತಂಡದವರು ಯಶಸ್ವಿಯಾಗಿ ಪ್ರದರ್ಶನ ಮಾಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ರಾಮಾಯಣವನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಬರೆಯುವ ಕೆಲಸವನ್ನು ಅನೇಕರು ಮಾಡಿದ್ದಾರೆ. ಆದರೆ, ವಾಲ್ಮೀಕಿ ರಾಮಾಯಣಕ್ಕೆ ಸಾಟಿಯಾಗುವಂತೆ ಯಾರೂ ಹೊಸ ರಾಮಾಯಣ ಬರೆಯಲು ಸಾಧ್ಯವಾಗಿಲ್ಲ. ಮಹಾನ್‌ ಗ್ರಂಥಕ್ಕೆ ಇರುವ ಶಕ್ತಿಯೇ ಅಂಥದ್ದು’ ಎಂದರು.


Spread the love

About Laxminews 24x7

Check Also

ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (

Spread the loveಬೆಂಗಳೂರು, ಜುಲೈ 1: ‘ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (BR Patil) ಆಡಿದ್ದ ಅಬ್ಬರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ