ಕೊಪ್ಪಳ, ಮಾರ್ಚ್.11; ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆನೆಗೊಂದಿ ಉತ್ಸವವನ್ನು (Anegondi Utsav) ಹಮ್ಮಿಕೊಳ್ಳಲಾಗಿದೆ. ಈ ಭಾಗದ ಇತಿಹಾಸ, ಕಲೆ, ಸಂಸ್ಕ್ರತಿಯನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕೊಪ್ಪಳ ಜಿಲ್ಲಾಡಳಿತದಿಂದ ಎರಡು ದಿನಗಳ ಉತ್ಸವನನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ.
ಇಂದು ಮುಂಜಾನೆ ಆನೆಗೊಂದಿಯ ಆಧಿಶಕ್ತಿ ದೇವಸ್ಥಾನದಲ್ಲಿ ಸಾಂಸ್ಕ್ರತಿಕ ಕಲಾತಂಡಗಳ ಮೆರವಣಿಗೆಗೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಚಾಲನೆ ನೀಡಿದ್ದಾರೆ. ಇನ್ನು ಸಂಜೆ ಆನೆಗೊಂದಿಯ ಉತ್ಸವ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕ್ರತಿ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ. ಶಸಾಕ ಜನಾರ್ಧನ ರೆಡ್ಡಿ ಸೇರಿದಂತೆ ಅನೇಕ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಚಿತ್ರನಟ ಧ್ರುವ ಸರ್ಜಾ ಕೂಡಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ ಅನೇಕ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಅವರ ತಂಡದಿಂದ ಚಿತ್ರಗೀತೆಗಳ ಗಾಯನದ ಜೊತೆಗೆ ಕಿಷ್ಕಿಂದೆ ಕಾಂಡದ ಕಥಾನಕ ರೂಪದಲ್ಲಿ ಪ್ರದರ್ಶಿಸಲಿದೆ.