ನವದಹೆಲಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪರಿಷ್ಕರಿಸುವ ಅಥವಾ ನಾಶಪಡಿಸುವ ಗುಪ್ತ ಮತ್ತು ಕಪಟ ಅಜೆಂಡಾವನ್ನು ಬಿಜೆಪಿ-ಆರ್‌ಎಸ್‌ಎಸ್ ಹೊಂದಿವೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಹೇಳಿದೆ.
‘ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದರೆ ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ’ ಎಂದು ಸಿದ್ದಾಪುರ ತಾಲೂಕಿನ ಹಲಗೇರಿಯ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು.ಈ ಹೇಳಿಕೆಗೆ ಬಾರಿ ವಿರೋಧ ವ್ಯಕ್ತವಾಗಿತ್ತು.
‘ಬಿಜೆಪಿ ಸಂಸದರ ಈ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಘ ಪರಿವಾರದ ಗುಪ್ತ ಉದ್ದೇಶಗಳ ಬಹಿರಂಗ ಘೋಷಣೆಯಾಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ ಬಾಬಾ ಸಾಹೇಬರ ಸಂವಿಧಾನವನ್ನು ನಾಶಪಡಿಸುವುದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
‘ಬಿಜೆಪಿ ಮತ್ತು ಆರ್‌ಎಸ್‌ಎಸ್ ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತವೆ. ಸಮಾಜವನ್ನು ವಿಭಜಿಸಿ, ಮಾಧ್ಯಮವನ್ನು ಗುಲಾಮರನ್ನಾಗಿ ಮಾಡಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡು, ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿ, ವಿರೋಧ ಪಕ್ಷಗಳನ್ನು ಇಲ್ಲವಾಗಿಸುವ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರವನ್ನು ಸರ್ವಾಧಿಕಾರದ ರಾಷ್ಟ್ರವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ’ ಎಂದರು.
‘ಸಂವಿಧಾನದ ಪ್ರತಿಯೊಬ್ಬ ಸೈನಿಕರು ವಿಶೇಷವಾಗಿ ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರೇ ಎಚ್ಚೆತ್ತುಕೊಳ್ಳಿ.. ನಿಮ್ಮ ಧ್ವನಿ ಎತ್ತಿ… ಭಾರತವು ನಿಮ್ಮೊಂದಿಗಿದೆ’ ಎಂದು ಹೇಳಿದರು.