ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾರ್ಚ್ 12ರಿಂದ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸ್ವಿಗ್ಗಿ ಕಂಪನಿ ಸಜ್ಜಾಗಿದೆ.
ಸ್ವಿಗ್ಗಿ ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ಮಂಗಳವಾರ ಈ ಕುರಿತ ಒಡಂಬಡಿಕೆಗೆ ಸಹಿ ಹಾಕಿವೆ.
ಮೊದಲ ಹಂತದಲ್ಲಿ ಬೆಂಗಳೂರು, ಭುವನೇಶ್ವರ, ವಿಶಾಖಪಟ್ಟಣ ಹಾಗೂ ವಿಜಯವಾಡ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಲಿದೆ. ಹಂತ ಹಂತವಾಗಿ ಈ ಸೇವೆಯನ್ನು 59ಕ್ಕೂ ಹೆಚ್ಚು ನಿಲ್ದಾಣಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.
ಪ್ರಯಾಣಿಕರು ಐಆರ್‌ಸಿಟಿಸಿ ಆಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ತಾವು ಖರೀದಿಸಿರುವ ಟಿಕೆಟ್‌ನ ಪಿಎನ್‌ಆರ್ ಸಂಖ್ಯೆ ನಮೂದಿಸಬೇಕು. ಬಳಿಕ ಯಾವ ನಿಲ್ದಾಣಕ್ಕೆ ಆಹಾರ ಪೂರೈಸಬೇಕು ಎಂಬ ಬಗ್ಗೆ ಮುಂಗಡವಾಗಿ ಆರ್ಡರ್ ಮಾಡಬೇಕಿದೆ. ಈ ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ತಾನು ಸಂಪರ್ಕ ಹೊಂದಿರುವ ರೆಸ್ಟಾರೆಂಟ್‌ಗಳ ಮೂಲಕ ಪ್ರಯಾಣಿಕರಿಗೆ ಆಹಾರ ತಲುಪಿಸಲಾಗುತ್ತದೆ ಎಂದು ಹೇಳಿದೆ.
‘ಸ್ವಿಗ್ಗಿ ಜೊತೆಗಿನ ಈ ಒಪ್ಪಂದವು ಪ್ರಯಾಣಿಕರ ಪಯಣವನ್ನು ಸ್ಮರಣೀಯವಾಗಿಸಲಿದೆ’ ಎಂದು ಐಆರ್‌ಸಿಟಿಸಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕುಮಾರ್ ಜೈನ್ ತಿಳಿಸಿದ್ದಾರೆ.