ಹೊಸಕೋಟೆ: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 11 ವಿದ್ಯಾರ್ಥಿ ನಿಲಯಗಳಲ್ಲಿ ಏಳರಲ್ಲಿ ನಿಲಯ ಪಾಲಕರು ಇಲ್ಲ. 11 ಹಾಸ್ಟೆಲ್‌ಗಳ 590 ವಿದ್ಯಾರ್ಥಿಗಳನ್ನು ನಾಲ್ಕೇ ನಿಲಯಪಾಲಕರು ನೋಡಿಕೊಳ್ಳಬೇಕಿದೆ.
11 ವಿದ್ಯಾರ್ಥಿ ನಿಯಲಗಳಲ್ಲಿ ಮೂರು ನಿಲಯಪಾಲಕರು ಇದ್ದಾರೆ.
ಒಂದರಲ್ಲಿ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಈ ನಾಲ್ವರು 11 ವಿದ್ಯಾರ್ಥಿ ನಿಲಯಗಳನ್ನು ನಿರ್ವಹಣೆ ಮಾಡಬೇಕಿದೆ.
10 ಹಾಸ್ಟೆಲ್‌ಗಳನ್ನು ಕೇವಲ ಮೂವರು ಮಾತ್ರ ನೋಡಿಕೊಳ್ಳಬೇಕಿರುವುದರಿಂದ ಅವುಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಮೂವರಲ್ಲಿ ಒಬ್ಬರಿಗೆ ಐದು ಹಾಸ್ಟೆಲ್, ಮತ್ತೊಬ್ಬರಿಗೆ ಮೂರು ಹಾಸ್ಟೆಲ್, ಮತ್ತೊಬ್ಬರಿಗೆ ಎರಡು ಹಾಸ್ಟೆಲ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಐದು ಹಾಸ್ಟೆಲ್‌ಗಳನ್ನು ನೋಡಿಕೊಳ್ಳುವ ವಾರ್ಡನ್ ಪಾಡಂತೂ ಹೇಳತೀರದಾಗಿದೆ. ಕನಿಷ್ಠ ಒಂದು ದಿನವೂ ಹಾಸ್ಟೆಲ್‌ನಲ್ಲಿದ್ದು ಮಕ್ಕಳ ಸಮಸ್ಯೆ ಆಲಿಸಲು ಸಾಧ್ಯವಾಗದಷ್ಟು ಒತ್ತಡ ಅವರ ಮೇಲಿದೆ.
ನಿಲಯ ಪಾಲಕರು ಕೇವಲ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಊಟ ಮತ್ತು ವಸತಿ ವ್ಯವಸ್ಥೆ ಮಾಡುವುದು ಮಾತ್ರವಲ್ಲ. ಮಕ್ಕಳಿಗೆ ಪೋಷಕರಂತೆ ಎಲ್ಲ ರೀತಿಯ ಸಮಸ್ಯೆಗಳನ್ನು ನೋಡಿಕೊಳ್ಳಬೇಕಿದೆ. ವಾರ್ಡನ್‌ಗಳ ಕೊರತೆ ಇರುವುದರಿಂದ ಜವಾಬ್ದಾರಿ ವಹಿಸಿಕೊಂಡಿರುವ ಹಾಸ್ಟೆಲ್‌ಗಳಿಗೆ ಸುತ್ತಾಡುತ್ತಲೇ ಇರುತ್ತಾರೆ. ಪೋಷಕರ ರೀತಿಯಲ್ಲಿ ನೋಡಿಕೊಳ್ಳಬೇಕಾದ ನಿಲಯಪಾಲಕರು ನಮಗೆ ದಿನ ಪೂರ್ತಿ ಸಿಗುವಂತಾಗಲಿ ಎಂದು ಬಿಸಿಎಂ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬ ತಿಳಿಸುತ್ತಾರೆ.