ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮತ್ತು ಕನ್ನಡದಲ್ಲಿ ಐಎಎಸ್ (IAS) ಬರೆದು ಪಾಸಾದ ನಾಡಿನ ಮೊದಲಹೆಮ್ಮೆಯ ಕುವರ ಕೆ ಶಿವರಾಮ್(K Shivaram) ಕೊನೆಯುಸಿರೆಳೆದಿದ್ದಾರೆ.
ದಕ್ಷ ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದ ಶಿವರಾಮು ಸ್ಯಾಂಡಲ್ ವುಡ್ ನಟ (actor) ಕೂಡ ಆಗಿದ್ದರು ಹಾಗೂ ನಿವೃತ್ತಿಯ ಬಳಿಕ ರಾಜಕೀಯಕ್ಕಿಳಿದು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರ ನಿಧನ ಕೇವಲ ಸಂಬಂಧಿಕರಿಗೆ ಮತ್ತು ಅಭಿಮಾನಿಗಳಿಗೆ ಮಾತ್ರವಲ್ಲ, ಅವರನ್ನು ಬಲ್ಲ ಅನೇಕರಿಗೆ ಆಘಾತಕಾರಿ ಸಂಗತಿಯಾಗಿದೆ ಎಂದು ಅವರ ಒಡನಾಡಿ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಸಿದ್ಧರಾಜು ಭಾವುಕರಾಗಿ ಹೇಳುತ್ತಾರೆ. ಮಹತ್ವಾಕಾಂಕ್ಷೆಯ ವ್ಯಕ್ತಿಯಾಗಿದ್ದ ಶಿವರಾಮ್ ಒಬ್ಬ ಹೋರಾಟಗಾರರಾಗಿದ್ದರು ಮತ್ತು ಅತೀವ ಜನಪರ ಕಾಳಜಿ ಹೊಂದಿದ್ದರು.
ಕಡುಬಡತನದಲ್ಲಿ ಹುಟ್ಟಿದ್ದರೂ ಬಾಲ್ಯದಿಂದಲೇ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಆದರ್ಶಗಳನ್ನು ರೂಢಿಸಿಕೊಂಡು ಉತ್ತುಂಗಕ್ಕೇರಿದರು ಎಂದು ಸಿದ್ಧರಾಜು ಹೇಳಿದರು.
ಶಿವರಾಮ್ ಅವರ ಪತ್ನಿ ತನ್ನ ಸಹಪಾಠಿ ಆಗಿದ್ದರೆಂದ ಅವರು, ಮೃತ ಸ್ನೇಹಿತನಿಗೆ ರಾಜಕೀಯದ ಮೂಲಕ ಜನರ ಸೇವೆ ಮಾಡುವ ಉತ್ಕಟ ಆಸೆ ಇತ್ತು ಎಂದರು.
ಕಳೆದ ಲೋಕ ಸಭಾ ಚುನಾವಣೆಯಲ್ಲಿ ಅವರು ಗೆಲ್ಲಲಿಲ್ಲವಾದರೂ ಲಕ್ಷಾಂತರ ಜನ ಅವರಿಗೆ ಮತ ನೀಡಿ ತಮ್ಮ ಪ್ರೀತಿ ವಿಶ್ವಾಸ ಪ್ರದರ್ಶಿಸಿದ್ದರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿದ ಸ್ಪರ್ಧಿಸುವ ಬಯಕೆ ಹೊಂದಿದ್ದರು ಮತ್ತು ಅದಕ್ಕಾಗಿ ಸಾಕಷ್ಟು ಓಡಾಟ ಕೂಡ ನಡೆಸಿದ್ದರು ಎಂದು ಸಿದ್ಧರಾಜು ಹೇಳಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಬದುಕಿನಲ್ಲಿ ಉನ್ನತ ಹಂತ ತಲುಪಬೇಕೆಂಬ ತುಡಿತ ಹೊಂದಿದ್ದ ಅವರ ಸಾವು ತಮಗೆಲ್ಲ ಬಹಳ ಆಘಾತವನ್ನುಂಟು ಮಾಡಿದೆ ಎಂದು ಸಿದ್ಧರಾಜು ಹೇಳಿದರು.