ಬೆಂಗಳೂರು: ಐದು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ಜೀವ ಚೆಲ್ಲಿದ 40 ಜನ ಭಾರತೀಯ ಸೈನಿಕರ ಹತ್ಯೆಗೆ ಕಾರಣ ಯಾರು? ಈ ಕೃತ್ಯಕ್ಕೆ ಬಳಸಿದ ಆರ್‌ಡಿಎಕ್ಸ್ ಎಲ್ಲಿಂದ ಬಂತು? ಈ ಪ್ರಕರಣದ ತನಿಖೆ ಏನಾಯ್ತು? ಎಂಬುದನ್ನು ಅಯೋಗ್ಯ ಬಿಜೆಪಿ ನಾಯಕರು ಸ್ಪಷ್ಟಪಡಿಸಲಿ ಎಂದು ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.
ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಮಾತನಾಡುತ್ತಾ ಕಾಂಗ್ರೆಸ್ ವಿರುದ್ಧ ಕಿಡಿಕಾರುವ ಬರದಲ್ಲಿ, “ಕೇಂದ್ರ ಸರ್ಕಾರ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಯಾವ ಪಕ್ಷ? ದೇಶ ಒಡೆದದ್ದು ಯಾರು?” ಎಂದು ಪ್ರಶ್ನಿಸಿದರು.
ಈ ವೇಳೆ ಶಾಸಕರ ಭಾಷಣದ ನಡುವೆ ಮಧ್ಯ ಪ್ರವೇಶಿ ಪುಲ್ವಾಮಾ ಹತ್ಯಾಕಾಂಡ ಘಟನೆಯನ್ನು ಉಲ್ಲೇಖಿಸಿ ಬಿಜೆಪಿಗರ ವಿರುದ್ಧ ಕಿಡಿಕಾರಿದ ಸಚಿವ ಕೃಷ್ಣ ಬೈರೇಗೌಡ ಅವರು, “ನಮ್ಮ ದೇಶದ 40 ಜನ ಸೈನಿಕರ ಸಾವಿಗೆ ಕಾರಣ ಯಾರು ಎಂಬುದನ್ನು ಜನರ ಮುಂದೆ ಹೇಳಲಾಗದ, ಪ್ರಕರಣದ ತನಿಖೆ ನಡೆಸುವ ಯೋಗ್ಯತೆಯೂ ಇಲ್ಲದ ಅಯೋಗ್ಯರು ಬಿಜೆಪಿಗರು. ಇವರಿಗೆ ದೇಶಕ್ಕೆ ಬೆಂಕಿ ಇಟ್ಟು ಓಟು ಹಾಕಿಸಿಕೊಳ್ಳುವುದನ್ನು ಬಿಟ್ಟು ಬೇರೇನು ಮಾಡಿದ್ದಾರೆ? ಎಂದು ಆಕ್ರೋಶ ಹೊರಹಾಕಿದರು.