ಬಳ್ಳಾರಿ: ಪಾಕ್ ಪರವಾಗಿ ಘೋಷಣೆ ಕೂಗಿದ ಆರೋಪ ಹಿನ್ನೆಲೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು (BJP Activist) ಬಳ್ಳಾರಿಯಲ್ಲಿರುವ ನಾಸಿರ್ ಹುಸೇನ್ (Syed Naseer Hussain) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆದ್ದ ಬೆನ್ನಲ್ಲೇ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಆರೋಪದ ಬೆನ್ನಲ್ಲೇ ಸೈಯದ್ ನಾಸಿರ್ ಹುಸೇನ್ ಅವರ ಬಳ್ಳಾರಿಯ ಕಚೇರಿಯ ಮುಂದೆ ಭಾರೀ ಹೈಡ್ರಾಮಾ ನಡೆಯಿತು.
ಪಾಕ್ ಪರ ಘೋಷಣೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಮೋತಿ ಸರ್ಕಲ್ ಬಳಿಯ ಬೂಡಾ ಕಚೇರಿಯ ಆವರಣದಲ್ಲಿರುವ ನಾಸಿರ್ ಹುಸೇನ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಈ ವೇಳೆ ಕಚೇರಿ ಮುಂದೆ ಹಾಕಿದ್ದ ನಾಮಫಲಕ ಕಿತ್ತು ಹಾಕಲು ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.