ರಾಯಬಾಗ: ಕರ್ನಾಟಕ ಹಾಗೂ ಮಹಾರಾಷ್ಟ್ರ ಭಕ್ತರ ಆರಾಧ್ಯ ದೇವತೆ ಚಿಂಚಲಿ ಮಾಯಕ್ಕದೇವಿ ಜಾತ್ರೆ ಫೆ.28ರಿಂದ ಮಾರ್ಚ್ 3ರವರೆಗೆ ಐದು ದಿನ ವೈಭವೋಪೇತವಾಗಿ ಜರುಗಲಿದೆ.
ಮಾಯಕಾರತಿ, ಮಹಾಕಾಳಿ, ಮಾಯವ್ವ ಎಂಬೆಲ್ಲ ಹೆಸರಿನಿಂದ ಪೂಜಿಸಲ್ಪಡುವ ಮಾಯಕ್ಕ ದೇವಿ ಜಾತ್ರೆಗೆ ಚಿಂಚಲಿ ಪಟ್ಟಣ ಸಂಭ್ರಮದಿಂದ ಸಜ್ಜುಗೊಂಡಿದೆ.
ಈ ಜಾತ್ರೆಗೆ ನೆರೆಯ ತಮಿಳುನಾಡು, ಗೋವಾ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಲಕ್ಷ ಭಕ್ತರು ಆಗಮಿಸುತ್ತಾರೆ.
ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವುದು ಪ್ರತಿವರ್ಷದ ವಾಡಿಕೆ. ಬೃಹತ್ ಪ್ರಮಾಣದ ಜಾನುವಾರುಗಳ ಜಾತ್ರೆ ಕೂಡ ನಡೆಯುತ್ತದೆ. ಭಕ್ತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಆಸ್ಪತ್ರೆ, ವಸತಿ ಗೃಹಗಳು, ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ.
ವಿಶೇಷವೆಂದರೆ ಈ ದೇವಿಯ ಮುಖ್ಯ ವಾಹನ ಕುದುರೆ. ಅವಳ ವಿಗ್ರಹಗಳು, ಪಲ್ಲಕ್ಕಿ, ಉತ್ಸವ ಮೂರ್ತಿ ಎಲ್ಲವೂ ಅಶ್ವಾರೂಢ ಆಗಿರುತ್ತವೆ. ದೇವಿಯ ಕುದುರೆಗೂ ಆಕೆಯೊಂದಿಗೆ ವಿಶಿಷ್ಟ ಮಹತ್ವ ನೀಡಲಾಗಿದೆ. ಭಕ್ತರು ಮಾಯಕ್ಕನ ಕುದುರೆ ಮುಖಕ್ಕೆ ಭಂಡಾರ ಲೇಪಿಸಿ ನಂತರ ಹಣೆಗೆ ಲೇಪಿಸಿಕೊಳ್ಳುವ ವಾಡಿಕೆ ಇದೆ.
ದೇವಿಯು ಮೈಮೇಲೆ ಬಂದವರಂತೆ ಕುಣಿಯುವ ಭಕ್ತರ ಸಂಖ್ಯೆಯೂ ದೊಡ್ಡದು. ಕೈಯಲ್ಲಿ ಬೆತ್ತದಕೋಲು ಹಿಡಿದು ವೀರಾವೇಶದಿಂದ ಕುಣಿಯುವ ಭಕ್ತರು ‘ಚಾಂಗಭಲೋ ಹೋಕ್ ಭಲೋ’ ಎಂದು ಕೂಗುತ್ತ ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ.