ಮುಂಡರಗಿ: ತಾಲ್ಲೂಕಿನ ಮೇವುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರದೂರು ಗ್ರಾಮದಲ್ಲಿ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ, ಸಾರ್ವಜನಿಕರು ಬಳಸಿದ ಗಲೀಜು ನೀರು ಹರಿದು ಹೋಗುವುದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲದೆ ಗ್ರಾಮದ ಜನರು ಹಲವು ದಶಕಗಳಿಂದ ಪರದಾಡುತ್ತಿದ್ದಾರೆ.
ತಾಲ್ಲೂಕು ಕೇಂದ್ರ ಸ್ಥಳದಿಂದ ಕೇವಲ ಐದು ಕಿ.ಮೀ. ದೂರದಲ್ಲಿರುವ ಬರದೂರು ಗ್ರಾಮವು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಗ್ರಾಮಸ್ಥರು ಹಲವಾರು ಸಮಸ್ಯೆಗಳ ನಡುವೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಾ ದಿನಗಳೆಯುತ್ತಿದ್ದಾರೆ.
ಗ್ರಾಮವು ಬೇಕಾಬಿಟ್ಟಿಯಾಗಿ ನಿರ್ಮಾಣವಾಗಿದ್ದು, ಈಗಲೂ ಅದಕ್ಕೆ ಒಂದು ನಿಶ್ಚಿತ ರೂಪ ಕೊಡುವುದು ಅಧಿಕಾರಿಗಳಿಗೆ ಕಷ್ಟಸಾಧ್ಯವಾಗಿದೆ. ಗ್ರಾಮದಲ್ಲಿ ಎಲ್ಲಂದರಲ್ಲಿ ಇಕ್ಕಟ್ಟಾದ ಮನೆಗಳನ್ನು ನಿರ್ಮಿಸಿರುವುದರಿಂದ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ಹಾಗೂ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ತೀವ್ರ ತೊಂದೆಯಾಗಿದೆ.
ಬರದೂರು ಗ್ರಾಮವು ಮುಂಡರಗಿ-ಗದಗ ರಾಜ್ಯ ಹೆದ್ದಾರಿ ಪಕ್ಕದಲ್ಲಿ (ಅರಬಾವಿ-ಚಳ್ಳಕೇರಿ ರಸ್ತೆ) ಹಾಯ್ದು ಹೋಗಿದ್ದು, ಸುಮಾರು 3,600 ಜನಸಂಖ್ಯೆ ಹೊಂದಿದೆ. ಗ್ರಾಮದ ಒಳಭಾಗವು ತುಂಬಾ ಕಿರಿದಾದ ಮತ್ತು ಇಕ್ಕಟ್ಟಾದ ರಸ್ತೆಗಳನ್ನು ಒಳಗೊಂಡಿದೆ. ಬಹುತೇಕ ರಸ್ತೆಗಳು ಟ್ರ್ಯಾಕ್ಟರ್, ಕಾರು ಹಾಗೂ ಮತ್ತಿತರ ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಬಾರದಷ್ಟು ಕಿರಿದಾಗಿವೆ. ಇದರಿಂದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ ಹಾಗೂ ಮತ್ತಿತರ ವಾಹನಗಳು ಊರಿನ ಒಳಗೆ ಪ್ರವೇಶಿಸದಂತಾಗಿವೆ.