ಬೆಳಗಾವಿ: ‘ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರು ಸಂದರ್ಭಕ್ಕೆ ತಕ್ಕಂತೆ ಧೈರ್ಯದಿಂದ ಕೆಲಸ ಮಾಡಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಎಸ್.ಎನ್.ಸಿದ್ರಾಮಪ್ಪ ಕರೆ ನೀಡಿದರು.
ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ತಮ್ಮ ಸೇವಾನಿವೃತ್ತಿ ಹಿನ್ನೆಲೆಯಲ್ಲಿ ಪೊಲೀಸರಿಂದ ಬುಧವಾರ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಬೆಳಗಾವಿಯಲ್ಲಿ ನಡೆಯುವ ಗಣೇಶ ಉತ್ಸವದ ವಿಸರ್ಜನೆಯಂಥ ಸಂದರ್ಭ ನಾವು 18ರಿಂದ 20 ತಾಸು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಪೊಲೀಸ್ ಇಲಾಖೆ ಘನತೆಗೆ ಚ್ಯುತಿ ಬಾರದಂತೆ, ನಾವು ಜನಸ್ನೇಹಿಯಾಗಿ ಕೆಲಸ ಮಾಡಬೇಕು’ ಎಂದರು.
‘ಯಾವುದೇ ಕೆಲಸದಲ್ಲಿ ಒಗ್ಗಟ್ಟು ಬಹಳ ಮುಖ್ಯ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ, ತಕ್ಷಣ ಬಗೆಹರಿಸಿಕೊಳ್ಳಬೇಕು. ಒಗ್ಗಟ್ಟಿನಿಂದ ಇದ್ದರೆ ಯಾವುದೇ ಪರಿಸ್ಥಿತಿ ಸುಲಭವಾಗಿ ನಿಭಾಯಿಸಬಹುದು’ ಎಂದು ಹೇಳಿದರು.
‘ಆರಕ್ಷಕರು ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು. ಅನ್ಯಾಯವಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು’ ಎಂದೂ ಕರೆ ನೀಡಿದರು.