ಕೋಲಾರ: ನಮ್ಮದು ಸಣ್ಣ ಪಕ್ಷ ನಾವು ಏನು ಮಾಡಬೇಕೋ ಮಾಡುತ್ತೇವೆ. ಸುಮಲತಾ ದೊಡ್ಡವರು ಅವರ ಕುರಿತು ಮಾತಾಡಲಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ (Mandya) ಲೋಕಸಭಾ ಕ್ಷೇತ್ರ ಜೆಡಿಎಸ್ (JDS) ಕೈ ತಪ್ಪಿ ಹೋಗಿದೆ ಎಂದು ಕೆಲವರು ಮಾತನಾಡುತ್ತಿದ್ದಾರೆ.
ಆದರೆ ಇನ್ನೂ ಸೀಟ್ ಹಂಚಿಕೆ ಆಗಿಲ್ಲ. ಸೀಟು ಹೊಂದಾಣಿಕೆ ಆಗಬೇಕು ಎಂದ ಅವರು, ಸುಮಲತಾ ಅವರ ಬಗ್ಗೆ ನಾವು ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.
ಮಂಡ್ಯದಿಂದ ತಾನು ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ನನ್ನ ಗಮನವೆಲ್ಲ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ 28 ಸ್ಥಾನ ಗೆದ್ದುಕೊಡುವುದರ ಮೇಲಿದೆ. ವೈಯಕ್ತಿಕ ಸ್ಪರ್ಧೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದರು.
ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರವಿವಾರ ತಡರಾತ್ರಿಯವರೆಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದು, ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಅವಕಾಶವಿರುವುದರಿಂದ ತಮ್ಮ ಅಭ್ಯರ್ಥಿ ಸ್ಪರ್ಧಿಸಬೇಕೆಂದು ಹೇಳುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಬಿಜೆಪಿ ವರಿಷ್ಠರಿಗೆ ನೀಡುತ್ತೇವೆ, ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.