ಕೀರ್ತಿನಾರಾಯಣ ಸಿ. ಬೆಂಗಳೂರುಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ, ಬಿ ಮತ್ತು ಸಿ ದರ್ಜೆಯ (ಐಪಿಎಸ್ ಅಧಿಕಾರಿಗಳನ್ನು ಹೊರತುಪಡಿಸಿ) ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಿರ-ಚರಾಸ್ತಿಯನ್ನು ಖರೀದಿಸಲು, ಮಾರಾಟ ಮಾಡಲು ಹಾಗೂ ಉಡುಗೊರೆ ರೂಪದಲ್ಲಿ ಪಡೆಯುವ ಮುನ್ನ ಪ್ರಾಧಿಕಾರದಿಂದ ಅನುಮತಿ ಪಡೆಯುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿರುವ ರಾಜ್ಯ ಪೊಲೀಸ್ ಇಲಾಖೆ, ಆಸ್ತಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ದಾಖಲಾತಿಗಳನ್ನು ಸಲ್ಲಿಸಲು ಆದೇಶಿಸಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 24 ಅನ್ವಯ ಚರಾಸ್ತಿ, ಸ್ಥಿರಾಸ್ತಿ ಮತ್ತು ಬೆಲೆಬಾಳುವ ಸ್ವತ್ತು ಉಪ ನಿಯಮ (3) ಪ್ರಕಾರ ಸರ್ಕಾರಿ ನೌಕರ ಅಥವಾ ಆತನ ಕುಟುಂಬ ಸದಸ್ಯರ ಹೆಸರಲ್ಲಿ ಆಸ್ತಿ ಖರೀದಿಸುವ ಮೊದಲೇ ಪ್ರಾಧಿಕಾರಕ್ಕೆ ತಿಳಿಸಬೇಕು. ಪ್ರಾಧಿಕಾರದ ಗಮನಕ್ಕಿಲ್ಲದೆ ಗುತ್ತಿಗೆ, ಅಡಮಾನ, ಖರೀದಿ, ಮಾರಾಟ, ಉಡುಗೊರೆ ಮೂಲಕ ಪಡೆಯಲು ಅವಕಾಶ ಇಲ್ಲ. ಒಂದು ವೇಳೆ ಪ್ರಾಧಿಕಾರಕ್ಕೆ ತಿಳಿಸದೆ ಇಂತಹ ವ್ಯವಹಾರ ಮಾಡಿದ್ದಲ್ಲಿ 2 ತಿಂಗಳ ಒಳಗಾಗಿ ಪೂರಕ ದಾಖಲಾತಿಗಳು ಹಾಗೂ ಸಮರ್ಥನೀಯ ಕಾರಣಗಳೊಂದಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕೆಂದು ಸ್ಪಷ್ಟಪಡಿಸಿದೆ.
ಒಂದು ವೇಳೆ ನಿಯಮಿತ ಪ್ರಾಧಿಕಾರಿಗೆ ಮೊದಲೇ ತಿಳಿಸದೆ ಆಸ್ತಿ ಖರೀದಿ ಅಥವಾ ಮಾರಾಟ ಮಾಡಿದ್ದರೆ 2 ತಿಂಗಳ ಒಳಗಾಗಿಯೂ ವರದಿ ಮಾಡದಿದ್ದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೆಎಸ್ಪಿ (ನಡತೆ) ನಿಯಮಗಳನ್ನು ಉಲ್ಲಂಘನೆ ಆರೋಪದಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಹೊರಡಿಸಿರುವ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
ಗಿಫ್ಟ್ ಪ್ರಕರಣಗಳೇ ಜಾಸ್ತಿ: ಉಡುಗೊರೆ ರೂಪದಲ್ಲಿ ಜಮೀನು ಅಥವಾ ನಿವೇಶನಗಳನ್ನು ಪಡೆಯುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ ಎಂದು ಮೂಲಗಳು ತಿಳಿಸಿವೆ. ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಆಸ್ತಿಗೆ ಸಂಬಂಧಪಟ್ಟಂತಹ ದಾಖಲಾತಿಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಮನವಿ ತಿರಸ್ಕೃತಗೊಳುತ್ತಿವೆ ಎಂದು ಹೇಳಲಾಗುತ್ತಿದೆ.
ಬೇನಾಮಿ ಸ್ವತ್ತು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಲೋಕಾಯುಕ್ತ ಪೊಲೀಸರ ದಾಳಿ ಸಂದರ್ಭದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಇದೇ ಕಾರಣಕ್ಕಾಗಿ ಕೆಲ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಬೇನಾಮಿಗಳ ಹೆಸರಲ್ಲಿ ಆಸ್ತಿ ನೋಂದಣಿ ಮಾಡಿ ವಂಚಿಸುತ್ತಿರುವ ಆರೋಪಗಳಿವೆ.
ಮನೆ ಕಟ್ಟಲು ದಾಖಲೆಗಳೇನು?
- ಗೃಹ ನಿರ್ವಣಕ್ಕೆ ಇಚ್ಛಿಸಿರುವ ನಿವೇಶನ ಖರೀದಿಸಲು ಇಲಾಖಾ ಅನುಮತಿ ಪತ್ರ.
- ತಗಲುವ ವೆಚ್ಚದ ಬಗ್ಗೆ ಇಂಜಿನಿಯರ್ ಅವರಿಂದ ಪಡೆದ ಅಂದಾಜು ವೆಚ್ಚದ ಪಟ್ಟಿ.
- ಮನೆ ಕಟ್ಟುವ ವೆಚ್ಚವನ್ನು ಯಾವ ಮೂಲದಿಂದ ಭರಿಸಲಾಗುತ್ತದೆ ಎಂಬ ದಾಖಲೆ.
- ಖರೀದಿ, ಗಿಫ್ಟ್ ಪಡೆಯಲು ದಾಖಲೆಗಳು
- ಆಸ್ತಿ ಮೌಲ್ಯ, ದರ ನಿಗದಿ ಪತ್ರ, ನೋಂದಣಿ ಶುಲ್ಕದ ವಿವರ ಹಾಗೂ ವಿಳಾಸ , ಮಾರಾಟಗಾರರಿಗೂ ಖರೀದಿದಾರರಿಗೂ ಸರ್ಕಾರಿ ವ್ಯವಹಾರ ಇಲ್ಲವೆಂದು ಖರೀದಿದಾರ/ಸರ್ಕಾರಿ ಅಧಿಕಾರಿ ನೀಡಿರುವ ದೃಢೀಕರಣ ಪತ್ರ, ಬ್ಯಾಂಕ್ ಸಾಲವಾಗಿದ್ದಲ್ಲಿ ಅದರ ಮೊತ್ತ, ಇಎಂಐ ವಿವರಗಳು.
- ಉಡುಗೊರೆ ಮೂಲಕ ಪಡೆಯಲು ಉದ್ದೇಶಿಸಿರುವ ಜಮೀನು ಸದ್ಯ ಯಾರ ಹೆಸರಿನಲ್ಲಿದೆ ಎಂಬ ವಿವರ.
- ಉಡುಗೊರೆ ನೀಡುತ್ತಿರುವವರ ವಿವರ, ಐಟಿಆರ್ ದಾಖಲೆ.
ನಿಯಮ ಪಾಲನೆ ಕಡ್ಡಾಯವೇಕೆ?
- ಆಸ್ತಿ ಖರೀದಿಗೆ ಪ್ರಾಧಿಕಾರದ ಅನುಮತಿ ಪಡೆಯ ಬೇಕೆಂಬ ನಿಯಮ ಪಾಲಿಸುತ್ತಿಲ್ಲ.
- ಅನುಮತಿ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ದಾಖಲಾತಿ ಅಪೂರ್ಣ, ಅನಗತ್ಯ ವಿಳಂಬಕ್ಕೆ ಕಾರಣ
- ಅಗತ್ಯವಾದಲ್ಲಿ ಪ್ರಾಧಿಕಾರಿಗಳು ಅರ್ಜಿದಾರರಿಂದ ಮಾಹಿತಿ, ದಾಖಲೆ ಪಡೆದು ಪರಿಶೀಲಿಸಲು ಸೂಚನೆ