ವಿಜಯಪುರ: ನಾಯಿ ಕದಿಯಲು ಬಂದಿದ್ದಾನೆ ಎಂದು ಭಾವಿಸಿ ಪಾನಮತ್ತ ವ್ಯಕ್ತಿಯನ್ನು ಅದೇ ನಾಯಿಯ ಗೂಡಿನಲ್ಲಿ ಕೂಡಿ ಹಾಕಿದ್ದು ಮಾತ್ರವಲ್ಲದೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ್ ಬಾರ್‌ನ ಸಿಬ್ಬಂದಿ ಪಾನಮತ್ತ ವ್ಯಕ್ತಿ ಸೋಮು ಬಾರ್‌ನ ಸಾಕುನಾಯಿಯನ್ನು ಕದಿಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿ, ಆತನನ್ನು ಅದೇ ನಾಯಿಯ ಗೂಡಿನಲ್ಲಿ ಕೂಡಿ ಹಾಕಿದ್ದಾನೆ.
ಮಾತ್ರವಲ್ಲದೇ ಆತನಿಗೆ ಅಮಾನುಷವಾಗಿ ಥಳಿಸಿದ್ದು, ಹಲವು ಗಂಟೆಗಳ ಕಾಲ ಗೂಡಿನಲ್ಲೇ ಬಂಧಿಸಿದ್ದ ಎನ್ನಲಾಗಿದೆ.
ಈ ವೇಳೆ ಸೋಮು ತಾನು ನಾಯಿ ಕದಿಯಲು ಬಂದಿಲ್ಲ, ನಾಯಿ ಮುದ್ದಾಗಿದೆ ಎಂದು ಅದನ್ನು ಹಿಡಿದು ಮುದ್ದಾಡಲು ಬಂದಿದ್ದೆ ಅಷ್ಟೇ ಎಂದು ಹೇಳಿ ತನ್ನನ್ನು ಬಿಡುಗಡೆಗೊಳಿಸಲು ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಕೊನೆಗೆ ಸ್ಥಳೀಯರು ಬಾರ್ ಸಿಬ್ಬಂದಿಯ ಬಳಿ ಮನವಿ ಮಾಡಿ ಸೋಮುನನ್ನು ಬಿಡುಗಡೆಗೊಳಿಸಿದ್ದಾರೆ.
ಬಾರ್ ಸಿಬ್ಬಂದಿಯ ಅಮಾನುಷ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಾರ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ