ಬೆಂಗಳೂರು: ಸಾರ್ವಜನಿಕ ಕ್ಷೇತ್ರದಲ್ಲಿರುವುದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಎಂ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ವಿಚಾರ ಹಾಗೂ ಕುಟುಂಬದ ಕುರಿತು ಪ್ರಶ್ನಿಸುತ್ತಾರೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ಸಮಯ ಸಿಗಲ್ಲ. ಇದರಿಂದ ಕುಟುಂಬಕ್ಕೆ ಸಮಯ ಕೊಟ್ಟಿದ್ದು, ಬಹಳ ಕಡಿಮೆ. ಇಡೀ ಸಮಾಜವೇ ನಮ್ಮ ಕುಟುಂಬವಾಗಿದೆ. ರಾಜಕೀಯಕ್ಕೆ ಬರುವ ವ್ಯಕ್ತಿಗಳು ಸಮಾಜಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಳ್ಳಬೇಕು ಎಂದರು.
ಇದಾದ ಬಳಿಕ ಸಚಿವ ಸುಧಾಕರ್ ಸಿದ್ದರಾಮಯ್ಯ ಅವರಿಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಅನ್ನು ಯಾಕೆ ಗೃಹ ಬಂಧನದಲ್ಲಿ ಇರಿಸಿದ್ದೀರಾ ಎಂದು ಪ್ರಶ್ನೆಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ, ನಾನು ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದು, ಎಲ್ಲಿ ಬೇಕಾದರೂ ಓಡಾಡಬಹುದು, ಪ್ರಮಾಣ ವಚನ ಕಾರ್ಯಕ್ರಮಕ್ಕೂ ಆಕೆಯನ್ನು ಆಹ್ವಾನಿಸಿದ್ದೆ. ಆದರೆ ಆಕೆ ಬರಲಿಲ್ಲ ಎಂದರು.
ನಾನು 1977ರಲ್ಲಿ ಮದುವೆ ಆದೆ. ತಾಲೂಕು ಪಂಚಾಯತಿಯಲ್ಲಿ ಸದಸ್ಯನಾದೆ. ಅದಾದ ಬಳಿಕ ಮನೆಗೆ ಸಮಯ ಕೊಡಲಾಗುವುದಿಲ್ಲ. ಅದೇ ರೂಢಿಯಾಗಿಬಿಟ್ಟಿದೆ ಎಂದರು.
ಈ ವೇಳೆ ಸಚಿವರು ಸಿಎಂಗೆ ತಮ್ಮ ಪತ್ನಿಯನ್ನು ಪರಿಚಯ ಮಾಡಿಸಿಕೊಡಿ ಎಂದು ಒತ್ತಾಯಿಸುತ್ತಾರೆ. ಅದಕ್ಕೆ ಒಪ್ಪಿದ ಸಿಎಂ ಒಮ್ಮೆ ಅವರನ್ನು ಕೇಳಿ ನೋಡುತ್ತೇನೆ ಎಂದು ಹೇಳುತ್ತಾರೆ.
ಈ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ, ಡಾ. ಜಿ ಪರಮೇಶ್ವರ್, ಎಂಸಿ ಸುಧಾಕರ್, ಶಿವರಾಜ್ ತಂಗಡಗಿ ವಿಡಿಯೋದಲ್ಲಿದ್ದರು.
ಸಿಎಂ @siddaramaiah ಅವರ ಕೌಟುಂಬಿಕ ಬದುಕಿನ ಬಗ್ಗೆ ಲೋಕಾಭಿರಾಮದ ಮಾತುಗಳು…. pic.twitter.com/bJQZjR8Im5
— Karnataka Congress (@INCKarnataka) February 20, 2024