ಬೆಂಗಳೂರು: ವಿನಾನಸಭಾ ಚುನಾವಣೆ ಗೆಲ್ಲಲು ಮಾಡಿದ್ದ ಪ್ಲ್ಯಾನ್ ಮೂಲಕವೇ ಲೋಕಸಭಾ ಚುನಾವಣೆ (Lokasabha Election) ಗೆಲ್ಲಲು ಕಾಂಗ್ರೆಸ್ (Congress) ಮುಂದಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ (DK Shivakumar) ಫೆಬ್ರವರಿ 23ರ ಬಳಿಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆ ಮಾದರಿಯಲ್ಲೇ ಲೋಕಸಭಾ ಚುನಾವಣೆ ಪ್ರಚಾರಕ್ಕೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾಹಿತಿ ಪ್ರಕಾರ, ಸಿಎಂ 16, ಡಿಸಿಎಂ 15 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.
ಇವರಿಗೆ ಸಂಪುಟದ ಸಚಿವರುಗಳೂ ಸೇರಿ ಪಕ್ಷದ ಪ್ರಮುಖರು ಸಾಥ್ ನೀಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ವಿಧಾನಸಭೆ ಚುನಾವಣೆ ವೇಳೆ ಹೆಣೆದ ತಂತ್ರವನ್ನೇ ಪ್ರಯೋಗಿಸುತ್ತಿದ್ದು, ಮೊದಲು ಇಬ್ಬರೂ ನಾಯಕರು ಪ್ರತ್ಯೇಕ ಪ್ರವಾಸ ನಡೆಸಿ ನಂತರ ಸಾಧ್ಯವಾದಷ್ಟೂ ಜಿಲ್ಲೆಗಳಲ್ಲಿ ಒಟ್ಟಾಗಿ ಪ್ರವಾಸ ಕೈಗೊಳ್ಳಲಿದ್ದಾರೆ.