ಯಾದಗಿರಿ, : ಕಾಡು ಪ್ರಾಣಿಗಳ (Wild Animals) ಹಾವಳಿಯಿಂದ ಬೆಳೆ ರಕ್ಷಣೆ ಮಾಡಲು ಯಾದಗಿರಿ ಜಿಲ್ಲೆಯ ರೈತರು (Yadgir Farmers) ಬಿಯರ್ ಬಾಟಲ್ಗಳು ಮತ್ತು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳ ಮೊರೆ ಹೋಗಿದ್ದಾರೆ! ಕಾಡು ಹಂದಿ ಹಾಗೂ ಹಕ್ಕಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಖಾಲಿ ಬಿಯರ್ ಬಾಟಲ್ಗಳ ಮೊರೆ ಹೋಗಿದ್ದಾರೆ. ಅಷ್ಟೇ ಯಾಕೆ ಬಿಸಾಡುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳನ್ನೂ ಬಳಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಯ ರೈತರು ಕೂಡ ಹೆಚ್ಚಾಗಿ ಬಿಳಿ ಜೋಳವನ್ನ ಬೆಳೆಯುತ್ತಾರೆ. ವಿಶೇಷ ಅಂದ್ರೆ ಜೋಳದ ಬೆಳೆ ಇಬ್ಬರ ಹೊಟ್ಟೆ ತುಂಬುತ್ತೆ. ಜೋಳ ರೈತರ ಹೊಟ್ಟೆ ತುಂಬಿದ್ರೆ ಜೋಳದ ಸೊಪ್ಪೆ ಜಾನುವಾರುಗಳ ಹೊಟ್ಟೆ ತುಂಬುತ್ತೆ. ಇದೆ ಕಾರಣದಿಂದ ಯಾದಗಿರಿ ಜಿಲ್ಲೆಯ ರೈತರು ಹಿಂಗಾರು ಬೆಳೆಯಾಗಿ ಅತೀ ಹೆಚ್ಚು ಜೋಳವನ್ನ ಬೆಳೆಯುತ್ತಾರೆ. ಆದ್ರೆ ಇದೆ ಜೋಳಕ್ಕೆ ಕಾಡಂದಿ ಹಾಗೂ ಹಕ್ಕಿಗಳ ಕಾಟ ಹೆಚ್ಚಾಗಿದೆ. ಸದ್ಯ ಜಮೀನುಗಳಲ್ಲಿ ಜೋಳ ಹೊರತು ಪಡಿಸಿದರೆ ಬೇರೆ ಯಾವ ಬೆಳೆ ಕೂಡ ಇಲ್ಲ. ಇದೇ ಕಾರಣಕ್ಕೆ ಕಾಡು ಹಂದಿಗಳು ರಾತ್ರಿ ವೇಳೆ ಜೋಳದ ಜಮೀನಿಗೆ ಬಂದು ಬೆಳೆ ಹಾಳು ಮಾಡುತ್ತಿವೆ.
ಒಂದು ಬಾರಿ ಏನಾದರೂ ಕಾಡು ಹಂದಿಗಳ ಹಿಂಡು ಜಮೀನಿಗೆ ಬಂತೆಂದರೆ ಸುಮಾರು 1 ರಿಂದ 2 ಎ ಕರೆ ಜೋಳದ ಬೆಳೆ ಹಾಗೆಯೇ ನೆಲ್ಕುರುಳಿಬಿಡುತ್ತವೆ. ಕಾಡು ಹಂದಿಗಳ ದಾಳಿ ವೇಳೆ ಯಾರಾದರೂ ಎದುರು ಬಂದ್ರೆ ಅವರಿಗೆ ಗುದ್ದಿ ಬಿಡುತ್ತವೆ. ಹೀಗಾಗಿ ಕಾಡು ಹಂದಿಗಳ ಕಾಟದಿಂದ ಹೇಗಾದರೂ ಮಾಡಿ ಜೋಳವನ್ನು ರಕ್ಷಣೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿರುವ ಅನ್ನದಾತರು ಖಾಲಿ ಬಿಯರ್ ಬಾಟಲ್ಗಳ ನೆರವು ಪಡೆದುಕೊಂಡಿದ್ದಾರೆ.