ಗೋಕಾಕ: ‘ಆಡಳಿತಾತ್ಮಕ ದೃಷ್ಟಿಯಿಂದ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಹೊಸ ಜಿಲ್ಲೆಗಳನ್ನು ರಚಿಸಲು ಮುಂದಾಗಿ, ರಾಜ್ಯ ಸರ್ಕಾರವು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ಸಲ್ಲಿಸುವಂತೆ ಆದೇಶಿಸಿರುವುದು ಸ್ವಾಗತಾರ್ಹ’ ಎಂದು ನೂತನ ಗೋಕಾಕ ಜಿಲ್ಲಾ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಅತಿದೊಡ್ಡ ಜಿಲ್ಲಾ ಕೇಂದ್ರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿ ಮಾಡುವಂತೆ ಪಿ.ಸಿ.ಗದ್ದಿಗೌಡರ, ವಾಸುದೇವರಾವ ಮತ್ತು ಹುಂಡೆಕರ ಸಮಿತಿಗಳು ಗೋಕಾಕ ನೂತನ ಜಿಲ್ಲೆ ಮಾಡುವಂತೆ ವರದಿ ನೀಡಿರುವ ಪರಿಣಾಮ ಅಂದಿನ ಜೆ.ಎಚ್.ಪಟೇಲರ ಸರ್ಕಾರ ಗೋಕಾಕ ತಾಲ್ಲೂಕು ಕೇಂದ್ರವನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿತ್ತು. ಆದರೆ ದಿ.ಪಾಟೀಲ ಪುಟ್ಟಪ್ಪ ಮತ್ತು ಕನ್ನಡಪರ ಹೋರಾಟಗಾರರು ಬೆಳಗಾವಿ ಗಡಿ ವಿಷಯದ ಕುರಿತು ಸರ್ಕಾರದ ಗಮನ ಸೆಳೆದಾಗ ಪಟೇಲರು ಆ ಆದೇಶವನ್ನು ಹಿಂಪಡೆದಿದ್ದರು. ಹಾಗಾಗಿ ಗೋಕಾಕ ಜಿಲ್ಲಾ ಕೇಂದ್ರ ಸ್ಥಾನದಿಂದ ವಂಚಿತವಾಗಿದೆ. ಆ ಕಾರಣಕ್ಕಾಗಿ ಸರ್ಕಾರ ಈಗ ಹೊಸ ಜಿಲ್ಲಾ ಕೇಂದ್ರಗಳ ರಚನೆಗೆ ಮುಂದಾಗಿದ್ದು, ಗೋಕಾಕ ತಾಲ್ಲೂಕು ಕೇಂದ್ರವನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿಸಲು ಪ್ರಥಮ ಆದ್ಯತೆ ನೀಡಿ ನೂತನ ಜಿಲ್ಲೆ ಎಂದು ಘೋಷಿಸಬೇಕು ಎಂದು ಶ್ರೀಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಟ್ಟು 18 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ಹೊಂದಿ ವಿಸ್ತಿರ್ಣದಲ್ಲಿ ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜನೆ ಮಾಡಿ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲೆಗಳನ್ನು ಮಾಡಬೇಕು ಎಂದು ಕಳೆದ 40 ವರ್ಷಗಳಿಂದಲೂ ನಿರಂತರ ಹೋರಾಟಗಳು ನಡೆದಿವೆ’ ಎಂದಿದ್ದಾರೆ.
‘ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ನಾಲ್ಕು ದಶಕಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ಎಲ್ಲವೂ ಬದಲಾಗಿದೆ ಬೆಳಗಾವಿ ನಗರ ಸೇರಿದಂತೆ ಗಡಿಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿದ್ದು, ಜಿಲ್ಲೆ ವಿಭಜನೆಗೆ ಗಡಿ ವಿಷಯ ಅಡ್ಡಿ ಬರುವುದಿಲ್ಲ’ ಎಂದಿರುವ ಅವರು, ‘ಆದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಹೊಸ ಜಿಲ್ಲೆಗಳನ್ನು ಮಾಡಲು ಸರ್ಕಾರ ಏಕಾಗ್ರತೆಯನ್ನು ಪ್ರರ್ದಶಿಸಬೇಕು’ ಎಂದು ಸ್ವಾಮೀಜಿ ಕೋರಿದ್ದಾರೆ.
Laxmi News 24×7