ಬೆಳಗಾವಿ, : ತುತ್ತು ಅನ್ನಕ್ಕಾಗಿ ಪರದಾಡಿ ತಾಯಿಯ (Mother) ಹಸಿವು(hunger)ನೋಡಲಾರದೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯೊಂದು ವೈರಲ್ ಆಗಿದ್ದು, ಬೆಳಗಾವಿಯ (Belagavi) ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನಕಲಕುವಂತೆ ಮಾಡಿತ್ತು.
ಅಲ್ಲದೇ ಈ ಸುದ್ದಿ ಓದುತ್ತಿರುವಾಗಲೇ ಕೆಲವರ ಕಣ್ಣೀರು ಹಾಕಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡು ಕಂಬನಿ ಮಿಡಿದಿದ್ದರು. ಆದ್ರೆ, ಈ ಸುದ್ದಿಗೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸುದ್ದಿಯ ಸತ್ಯಾಸತ್ಯತೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಬೆಳಗಾವಿಯಲ್ಲಿ ತಾಯಿ ಹಸಿವಿನ ಪರದಾಟ ನೋಡದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸುದ್ದಿ ಸುಳ್ಳು ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.
ಪೊಲೀಸರು ಮೃತ ಯುವಕ ಬಸವರಾಜನ ನಿಜವಾದ ತಂದೆ, ತಾಯಿ ಕರೆಸಿ ವಿಚಾರಣೆ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡ ಯುವಕ ಬಸವರಾಜ ಹಾಗೂ ಮಹಿಳೆ ಶಾಂತವ್ವ ತಾಯಿ ಮಗ ಅಲ್ಲ ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ಪ್ರಕರಣದ ಸತ್ಯಾಂಶ ಇಲ್ಲಿದೆ
ಇನ್ನು ಈ ಬಗ್ಗೆ ಬೆಳಗಾವಿ ಜಿಲ್ಲೆಯ ನಂದಗಡ ಪೊಲೀಸರು ಸತ್ಯಾಂಶ ಬಯಲು ಮಾಡಿದ್ದು, ಮೃತ ಬಸವರಾಜ ಮತ್ತು ಶಾಂತವ್ವ ಕಳೆದ 14ವರ್ಷದಿಂದ ಜೊತೆಗಿದ್ದರು. ಕೂಲಿ ಕೆಲಸಕ್ಕಾಗಿ ಗೋವಾ, ಬೆಂಗಳೂರು ಸೇರಿ ಅನೇಕ ಕಡೆ ಹೋಗುತ್ತಿದ್ದರು. ವಾರದ ಹಿಂದೆ ಗೋವಾಕ್ಕೆ ಹೋಗಿ ವಾಪಸ್ ಆಗುವ ವೇಳೆ ಇಬ್ಬರು ಪಾನಮತ್ತರಾಗಿದ್ದರು. ವಾಂತಿ ಮಾಡಿದ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರು ಮಹಿಳೆ ಶಾಂತವ್ವಳನ್ನು ರೈಲಿನಿಂದ ಕೆಳಗಿಳಿಸಿದ್ದರು. ಬಳಿಕ ಬಸವರಾಜ ಶಾಂತವ್ವಳನ್ನ ಅಳ್ನಾವರ ರೈಲು ನಿಲ್ದಾಣದಲ್ಲಿ ಬಿಟ್ಟು ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.