ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಚುನಾವಣ ಆಯೋಗ ನಿರ್ದೇಶನವೊಂದನ್ನು ಹೊರಡಿಸಿ ಈ ಬಾರಿ ಯಾವುದೇ ಕಾರಣಕ್ಕೆ ಮತ್ತು ಯಾವುದೇ ರೂಪದಲ್ಲಿ ಚುನಾವಣ ಪ್ರಚಾರದಲ್ಲಿ ಮಕ್ಕಳನ್ನು ಬಳಸಕೂಡದು ಎಂದು ತಾಕೀತು ಮಾಡಿದೆ.
ಈ ಹಿಂದೆ ಹಲವು ಬಾರಿ ಚುನಾವಣ ಆಯೋಗ ಸೂಚನೆ ನೀಡಿತ್ತಾದರೂ, ಈ ಸಲ “ಶೂನ್ಯ ಸಹನಾ’ ನಿಲುವು ತಳೆಯುವುದಾಗಿ ಸ್ಪಷ್ಟಪಡಿಸಿದೆ.
ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿರುವ ಆಯೋಗವು, ಜಿಲ್ಲಾ ಚುನಾವಣಾಧಿಕಾರಿಗಳು ಇದರ ಜವಾಬ್ದಾರಿ ಹೊರಬೇಕು ಎಂದು ಕಟ್ಟುನಿಟ್ಟಾಗಿ ಹೇಳಿರುವುದು ಸ್ವಾಗ ತಾರ್ಹ.
ಹಿಂದೆ ಹಲವು ಬಾರಿ ಇಂಥ ನಿರ್ದೇಶನ ಬಂದಿತ್ತಾದರೂ, ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿರುವ ಉದಾಹರಣೆ ಕಡಿಮೆಯೇ. ಮಕ್ಕಳನ್ನು ಎಗ್ಗಿಲ್ಲದೆ ಚುನಾವಣ ಪ್ರಚಾರಕ್ಕೆ ಬಳಸುತ್ತಿದ್ದ ಹಲವು ಉದಾಹರಣೆಗಳಿವೆ. ಬ್ಯಾನರ್ ಹಿಡಿಯುವುದರಿಂದ ಹಿಡಿದು, ಮನೆ ಮನೆಗೆ ಪ್ರಚಾರಕ್ಕೆ ತೆರಳುವವರೆಗೆ ಶಾಲಾ ಮಕ್ಕಳನ್ನು ಬಳಸುತ್ತಿರುವುದು ನಡೆಯುತ್ತಲೇ ಇದೆ.
ಶಾಲಾ ಮಕ್ಕಳಿಗೆ ಹಣವನ್ನು ನೀಡಿ ಮನೆ ಮನೆಗೆ ಕರಪತ್ರ ಹಾಕಲು ಬಳಸಿಕೊಂಡಿರುವುದು ಸಾಮಾನ್ಯ ಎನಿಸಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪ್ರಚಾರ ರ್ಯಾಲಿಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಜನರನ್ನು ಭಾವನಾತ್ಮಕ ಬಲೆಗೆ ಬೀಳಿಸುತ್ತಿರುವುದೂ ಆಯೋಗದ ಗಮನಕ್ಕೆ ಬಂದಿದ್ದು ಸ್ತುತ್ಯರ್ಹ. ಮಕ್ಕಳ ಚಿತ್ರವನ್ನು ಬಳಸುವುದಾಗಲಿ, ಮಕ್ಕಳ ಧ್ವನಿಯಲ್ಲಿ ಹಾಡು ಹೇಳಿಸುವುದು ಸಹ ಅಪರಾಧವಾಗುತ್ತದೆ.