ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮೇಟ್ಯಾಲ್ ಗ್ರಾಮದ ಪ್ರಗತಿಪರ ಕೃಷಿಕ ಶಿವಾನಂದ ಸಿದ್ದಪ್ಪ ಅಗಸಿಮನಿ ಬಿತ್ತನೆ ಮಾಡಿರುವ ಹೈಬ್ರಿಡ್ ತಳಿಯ ಜೋಳ ತೆನೆಗಟ್ಟಿದ್ದು, ಸಹಸ್ರಾರು ಕಾಳುಗಳನ್ನು ಒಳಗೊಂಡಿರುವುದು ವಿಶೇಷವಾಗಿದೆ.
ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಕಂಗೆಡದ ಅವರು, ಹಿಂಗಾರಿನಲ್ಲಿ ವಾತಾವರಣ ಆಶ್ರಯಿಸಿ ಬರುವ ‘ಹವಾಜೋಳ’ ಬೀಜ ಬಿತ್ತನೆ ಮಾಡಲಿಲ್ಲ.
ಬದಲಿಗೆ ನೀರಾವರಿ ಮೇಲೆ ಅವಲಂಬಿಸಿರುವ ಜೋಳದ ತಳಿ ಖರೀದಿಸಿ ಬಿತ್ತನೆ ಮಾಡಿದರು. ಅವರ ನಿರೀಕ್ಷೆಯೂ ಹುಸಿಯಾಗಲಿಲ್ಲ. ಹೆಚ್ಚಿನ ಇಳುವರಿಯ ಕನಸೂ ತೆನೆಗಟ್ಟಿ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಟ್ರ್ಯಾಕ್ಟರ್ ಮೂಲಕ ಹದ: ‘ಕುಟುಂಬದ ಬೇರೆ ಬೇರೆ ಕಡೆಗಳಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ನೀರಾವರಿ ಆಶ್ರಿತ ಜೋಳ ಬಿತ್ತನೆ ಮಾಡಲಾಗಿದೆ. ನಾಲ್ಕೂ ಕಡೆಗಳಲ್ಲಿ ನಿರೀಕ್ಷೆಗೂ ಮೀರಿ ಬೆಳೆ ಬಂದಿದೆ’ ಎನ್ನುತ್ತಾರೆ ಶಿವಾನಂದ.