ಬೆಳಗಾವಿ, : ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು (Woman) ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault) ನಡೆಸಲಾಗಿತ್ತು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಸದ್ಯ ಈಗ ಈ ಘಟನೆಗೆ ಕಾರಣವಾಗಿದ್ದ ವಂಟಮೂರಿ ಗ್ರಾಮದ ಪ್ರೇಮಿಗಳ ಮದುವೆ ಮಾಡಿಸಲಾಗಿದೆ. ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಲಾಗಿದೆ.
ದುಂಡಪ್ಪ ಅಶೋಕ ನಾಯಕ್ ಎಂಬ ವಂಟಮೂರಿ ಗ್ರಾಮದ ಯುವಕ, ಪ್ರಿಯಾಂಕಾ ಬಸಪ್ಪ ನಾಯಕ್ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಪೋಷಕರು ಇವರ ಪ್ರೀತಿಯನ್ನು ತಿರಸ್ಕರಿಸಿ ಯುವತಿಗೆ ಬೇರೊಬ್ಬರ ಜೊತೆ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಯುವತಿಯ ನಿಶ್ಚಿತಾರ್ಥದ ಹಿಂದಿನ ದಿನ ಇಬ್ಬರೂ ಪರಾರಿ ಆಗಿದ್ದರು. ಮಗಳು ಯುವಕನ ಜೊತೆ ಓಡಿ ಹೋದ ವಿಚಾರ ತಿಳಿಯುತ್ತಿದ್ದಂತೆ ಯುವತಿ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ದೌರ್ಜನ್ಯವೆಸಗಿದ್ದರು. ಡಿ.10ರಂದು ಯುವಕನ ತಾಯಿಯನ್ನು ಯುವತಿಯ ಕಡೆಯವರು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಬಳಿಕ ಬೆಳಗಾವಿ ಜಿಲ್ಲಾ ಪೊಲೀಸರು ಪ್ರೇಮಿಗಳನ್ನು ರಕ್ಷಣೆ ಮಾಡಿದ್ದರು. ಇದೀಗ ಉಪನೋಂದಣಿ ಕಚೇರಿಯಲ್ಲಿ ಕಾನೂನು ಪ್ರಕಾರ ವಿವಾಹ ಮಾಡಿಸಿದ್ದಾರೆ.