ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ಮಂಗಳವಾರ ನವ ದಂಪತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅವರ ರಕ್ಷಣೆಗೆ ಬಂದ ಇನ್ನಿಬ್ಬರ ಮೇಲೂ ಹಲ್ಲೆ ಮಾಡಲಾಗಿದೆ.
ಯಾಸಿನ್ ಬ್ಯಾಗೋಡೆ (21) ಹಾಗೂ ಹೀನಾಕೌಸರ್ (19) ಕೊಲೆಯಾದವರು.
ಇದೇ ಊರಿನ ತೌಫಿಕ್ ಕ್ಯಾಡಿ (24) ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಯಾಸಿನ್ ಹಾಗೂ ಹೀನಾಕೌಸರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಾಲ್ಕು ತಿಂಗಳ ಹಿಂದೆ ಹೀನಾಕೌಸರ್ ಅವರ ಮದುವೆಯನ್ನು ತೌಫಿಕ್ ಜತೆಗೆ ಮಾಡಲು ಹಿರಿಯರು ನಿಶ್ಚಯಿಸಿದ್ದರು. ಮದುವೆ ನಿಶ್ಚಯ ಆದ ಬಳಿಕ ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದರು. ಒಂದೂವರೆ ತಿಂಗಳ ಹಿಂದೆ ಪ್ರೇಮಿಗಳನ್ನು ಮರಳಿ ಊರಿಗೆ ಕರೆತಂದ ಪಾಲಕರು, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಮದುವೆ ಮಾಡಿಸಿದ್ದರು. ಒಂದೂವರೆ ತಿಂಗಳಿಂದ ನವದಂಪತಿ ಕೊಕಟನೂರಿನಲ್ಲಿ ವಾಸವಾಗಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಬೆಳವಣಿಗೆಗಳಿಂದ ತೌಫಿಕ್ ಕೋಪಗೊಂಡಿದ್ದರು. ಮಂಗಳವಾರ ಯಾಸಿನ್ ಮನೆಗೆ ನುಗ್ಗಿ ದಂಪತಿಯನ್ನು ಮಾರಕಾಸ್ತ್ರದಿಂದ ಹೊಡೆದರು. ತೀವ್ರ ರಕ್ತಸ್ರಾವದಿಂದ ದಂಪತಿ ಸಾವನ್ನಪ್ಪಿದರು. ಇವರ ರಕ್ಷಣೆಗೆ ಬಂದ ಪಾಲಕರಾದ ಅಮಿನಾಬಾಯಿ ಹಾಗೂ ಮುಸ್ತಫಾ ಮುಲ್ಲಾ ಅವರ ಮೇಲೂ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ. ಗಾಯಗೊಂಡ ಇಬ್ಬರನ್ನೂ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7