ಕಲಬುರಗಿ: ಬಿಹಾರದಲ್ಲಿ ಐದು ದಿನಗಳ ಹಿಂದೆಯೇ ನಿತೀಶ್ ಕುಮಾರ್ ಅವರು ಇಂಡಿಯಾ ಒಕ್ಕೂಟದಿಂದ ಹೊರ ಬಂದು ಮೈತ್ರಿ ತೊರೆಯುತ್ತಾರೆಂದು ತಿಳಿದಿತ್ತು ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಇಲ್ಲಿಂದ ಡೆಹ್ರಾಡೂನ್ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರೇ ತಮಗೆ ಫೋನ್ ಮಾಡಿ ಮೈತ್ರಿ ತೊರೆಯುವ ಬಗ್ಗೆ ಮಾಹಿತಿ ತಿಳಿಸಿದ್ದರು.
ಆಗ ಪಕ್ಷಗಳ ಬಲಾಬಲ ಬಗ್ಗೆ ಸ್ಪಷ್ಟ ಮಾಹಿತಿ ಪಡೆದಲಾಗಿತ್ತು. ಆದರೆ ಕುರಿತಾಗಿ ಎಲ್ಲೂ ಬಹಿರಂಗಪಡಿಸಬೇಡಿ ಎಂದಿದ್ದರಿಂದ ನಿನ್ನೆಯವರೆಗೂ ಏನೂ ಹೇಳಲಿಲ್ಲ ಎಂದು ವಿವರಣೆ ನೀಡಿದರು.
ಇಂಡಿಯಾ ಒಕ್ಕೂಟ ಬಲಪಡಿಸುವ ಹಾಗೂ ಸೀಟುಗಳ ಹೊಂದಾಣಿಕೆ ನಿಟ್ಟಿನಲ್ಲಿ ವಾಸ್ನಿಕ್ ಅವರ ನೇತೃತ್ವದಲ್ಲಿ ಆರು ಜನರ ಸಮಿತಿ ರಚಿಸಲಾಗಿದೆ. ಸಮಿತಿ ಈಗಾಗಲೇ ಆರ್ಜೆಡಿ, ಆಪ್, ಟಿಎಂಸಿ ಹಾಗೂ ಮೈತ್ರಿ ಕೂಟದ ಇತರ ಎಲ್ಲರೊಂದಿಗೆ ಮಾತುಕತೆ ನಡೆಸಿದೆ ಎಂದರು.
ಲೋಕಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಪಕ್ಷ ಸಿದ್ದತೆಗೆ ಮುಂದಾಗಿದೆ. ತಾವು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸಭೆ- ಸಮಾರಂಭಕ್ಕೆ ಮುಂದಾಗಲಾಗಿದೆ. ತೆಲಂಗಾಣ, ಒರಿಸ್ಸಾ, ಬಿಹಾರ, ಕೇರಳ, ದೆಹಲಿ ಸೇರಿ ಇತರೆಡೆ ದಿನಾಂಕ ನಿಗದಿಯಾಗಿದೆ. ತಾವು ಹೋಗುತ್ತಿದ್ದು, ಕೆಲವೆಡೆ ರಾಹುಲ್ ಗಾಂಧಿ ಅವರೂ ಬರಲಿದ್ದಾರೆ ಎಂದು ಖರ್ಗೆ ವಿವರಣೆ ನೀಡಿದರು.
ತಾವು ಇವತ್ತು ಡೆಹ್ರಾಡೂನ್ ದಲ್ಲಿ ಪಕ್ಷದ ಸಭೆ ನಡೆಸಲಾಗುತ್ತಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ ಜೋಡೋ ನ್ಯಾಯ ಯಾತ್ರಾ ನಡೆದಿದೆ. ಹೀಗೆ ಕಾಂಗ್ರೆಸ್ ಪಕ್ಷವೂ ಲೋಕಸಭೆಗೆ ಸಿದ್ದತೆಯಲ್ಲಿ ತೊಡಗಿದೆ ಎಂದರು
Laxmi News 24×7