ಶಿಕ್ಷಣಕ್ಕಾಗಿ ಅಕ್ಷರಶಃ ಮುಳ್ಳಿನ ಹಾದಿ ತುಳಿಯುತ್ತಿರುವ 70 ಶಾಲಾ ಮಕ್ಕಳು
ಕಾಲಲ್ಲಿ ಶೂ, ಚಪ್ಪಲಿ ಇಲ್ಲ, ನಡೆದುಕೊಂಡೇ ಬರುವ ಮಕ್ಕಳು, ಶಾಲೆಗೆ ಬರುವ ರಸ್ತೆ ಮಧ್ಯೆ ಮುಳ್ಳಿನ ಗಿಡಗಳನ್ನಿಟ್ಟಿರುವ ಅಕ್ಕಪಕ್ಕದ ಜಮೀನು ಮಾಲೀಕರು, ಶಾಲೆಗೆ ಹೋಗಲು ಇರುವ ಆ ದಾರಿಯಲ್ಲಿ ಮುಳ್ಳಿನಕಂಟಿಗಳಿದ್ರೂ ಅದನ್ನ ಸರಿಸಿ ದಾಟಿಕೊಂಡು ಮುನ್ನಡೆಯುತ್ತಿರುವ ಮಕ್ಕಳು… ಇದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಳ್ಳಿತೋಟ ಗ್ರಾಮದಲ್ಲಿನ ಸರ್ಕಾರಿ ಮಕ್ಕಳ ಸ್ಥಿತಿ.
ಹೌದು ಇಲ್ಲಿ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೇ ಮೊದಲು ಮುಳ್ಳಿನ ಗಿಡಗಂಟೆಗಳನ್ನ ದಾಟಬೇಕು. ಹಾಗಂತಾ ಇಲ್ಲಿ ಬೆಳೆದು ನಿಂತ ಮುಳ್ಳಿನ ಗಿಡಗಂಟೆಗಳನ್ನ ದಾಟುವುದೂ ಅಂತಲ್ಲ. ಬದಲಿಗೆ ಕತ್ತರಿಸಿ ದಾರಿ ಮಧ್ಯೆ ಇಟ್ಟಿರುವ ಗಿಡಗಂಟೆಗಳನ್ನ ದಾಟಿ ಹೋಗಬೇಕು. ಒಂದರಿಂದ ಐದನೇ ತರಗತಿ ವರೆಗೆ ಸುಮಾರು 70 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಆದ್ರೇ ಊರ ಹೊರಗಿರುವ ಈ ಸರ್ಕಾರಿ ಶಾಲೆಗೆ ಹೋಗಲು ರಸ್ತೆಯೇ ಇಲ್ಲ. ಈ ಹಿಂದೆ 18 ಅಡಿಯಷ್ಟು ರಸ್ತೆ ಇದ್ದು ಆದ್ರೇ ಇದೀಗ ಅದನ್ನ ಅಕ್ಕಪಕ್ಕದ ಜಮೀನಿನ ಮಾಲೀಕರು ತಮ್ಮದೇ ಜಾಗ ಅಂತಾ ವಾದಿಸುತ್ತಿದ್ದಾರೆ. ಇದರಿಂದ ಮಕ್ಕಳು ನಡೆದಾಡುವ ರಸ್ತೆಗೆ ಮುಳ್ಳಿನ ಗಿಡ ಹಾಕಿ ಬಂದ್ ಮಾಡಿದ್ದಾರೆ.
ಶಾಲೆ ನಿರ್ಮಿಸಿದಾಗಿನಿಂದಲೂ ಇದೇ ಸ್ಥಿತಿ ಇದ್ದು ಆರಂಭದಲ್ಲಿ ಜಮೀನಿನವರು ಕೂಡ ಯಾವುದೇ ಕಿರಿಕ್ ಮಾಡುತ್ತಿರಲಿಲ್ಲ. ಆದ್ರೇ ಇತ್ತಿಚೀಗೆ ತಮ್ಮ ಜಾಗ ಅಂತಾ ರಸ್ತೆಯನ್ನ ಬಂದ್ ಮಾಡಿದ್ದಾರೆ. ಇದರಿಂದ ಮಕ್ಕಳಿಗೆ ಸರಿಯಾದ ರಸ್ತೆ ಇಲ್ಲದೇ ಹಾಕಿರುವ ಮುಳ್ಳಿನ ಗಿಡಗಂಟೆಗಳನ್ನ ತೆಗೆದು ದಾಟಬೇಕು, ಇಲ್ಲವಾದ್ರೇ ಜಮೀನಿನಲ್ಲಿ ನಡೆದುಕೊಂಡು ಬರುವ ಸ್ಥಿತಿ ಇದೆ.
ಮಕ್ಕಳು ಹೇಗೋ ಬಂದ್ರೂ ಮಕ್ಕಳಿಗಾಗಿ ಆಹಾರ ಸಾಮಾಗ್ರಿಗಳನ್ನ ತರುವ ವಾಹನ ಸೇರಿದಂತೆ ಬೇರೆ ಯಾವೊಂದು ವಾಹನವೂ ಈ ಶಾಲೆಗೆ ಬಾರದ ಸ್ಥಿತಿ ಇದೆ. ಈಗಾಗಲೇ ಗ್ರಾಮಸ್ಥರು ಮತ್ತು ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ. ಜತೆಗೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ಶಾಲೆಗೆ ರಸ್ತೆ ಮಾಡಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಆದ್ರೇ ಈ ವರೆಗೂ ಯಾವುದೇ ರೀತಿ ಪ್ರಯೋಜನ ಮಾತ್ರ ಆಗಿಲ್ಲ, ಇದರಿಂದ ಗ್ರಾಮಸ್ಥರು ಒಂದು ಕಡೆ ಆಕ್ರೋಶ ಹೊರ ಹಾಕ್ತಿದ್ದಾರೆ. ಮತ್ತೊಂದು ಕಡೆ ಮಕ್ಕಳು ಕೂಡ ರಸ್ತೆ ಇಲ್ಲದೇ ಪರಿತಪ್ಪಿಸುತ್ತಿದ್ದು ಹೇಗಾದ್ರೂ ಮಾಡಿ ರಸ್ತೆ ಮಾಡಿಕೊಡಿ ಅಂತಾ ಮನವಿ ಮಾಡಿಕೊಳ್ತಿದ್ದಾರೆ. ಇತ್ತ ಜಮೀನಿನ ಮಾಲೀಕರು ಕಡಿಮೆ ಜಮೀನು ಹೊಂದಿದ್ದೇವೆ ದಾರಿಗೆ ಜಮೀನು ಕೊಟ್ರೇ ತಮಗೆ ಸಮಸ್ಯೆ ಆಗುತ್ತೆ ಅಂತಾ ನೆಪ ಹೇಳಿ ದಾರಿ ಬಂದ್ ಮಾಡಿದ್ದಾರೆ.
ಸದ್ಯ ಪುಟ್ಟಪುಟ್ಟ ಮಕ್ಕಳು ಶಾಲೆಗೆ ಹೋಗಲು ರಸ್ತೆ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ. ಗ್ರಾಮಸ್ಥರು ಸೇರಿದಂತೆ ಎಲ್ಲರೂ ಮಕ್ಕಳ ಸ್ಥಿತಿ ಕಂಡು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿದ್ರೂ ಯಾರಿಂದಲೂ ಸ್ಪಂದನೆ ಮಾತ್ರ ಸಿಗ್ತಿಲ್ಲ. ಇದೇ ರೀತಿ ಮುಂದುವರೆದಿದ್ದೇ ಆದ್ರೇ ಮುಂದಿನ ದಿನಗಳಲ್ಲಿ ಯಾರು ಕೂಡ ಈ ಸರ್ಕಾರಿ ಶಾಲೆಗೆ ಮಕ್ಕಳನ್ನ ಕಳುಹಿಸಿದ ಸ್ಥಿತಿ ನಿರ್ಮಾಣ ಆಗಿ ಶಾಲೆಯೇ ಮುಚ್ಚುವ ಸ್ಥಿತಿ ಬಂದ್ರೂ ಅಚ್ಚರಿ ಪಡಬೇಕಿಲ್ಲ. ಶಿಕ್ಷಣ ಸಚಿವರು ಎಚ್ಚೆತ್ತುಕೊಂಡು ಗಡಿ ಭಾಗದ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಕೆಲಸ ಮಾಡಲಿ.