ಹುಬ್ಬಳ್ಳಿ: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕೆ ಪೂರಕವಾಗಿ ವಾಣಿಜ್ಯ ನಗರಿಯೂ ಸಂಭ್ರಮದಿಂದ ಸಿದ್ಧಗೊಂಡಿದೆ. ನಗರದ ಪ್ರಮುಖ ವೃತ್ತ ಸೇರಿದಂತೆ ಗಲ್ಲಿಗಲ್ಲಿಯೂ ಕೇಸರಿ ಬಾವುಟಗಳಿಂದ ಸಿಂಗಾರಗೊಂಡಿದೆ.
ನಗರದ ದೇವಸ್ಥಾನಗಳು, ಮಠ-ಮಂದಿರಗಳು ರಾಮಧ್ವಜ, ಕೇಸರಿ ಬಾವುಟ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿವೆ. ಗ್ರಾಮೀಣ ಭಾಗದ ಗುಡಿ, ಮಂದಿರಗಳನ್ನು ಸಹ ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ. ವಿವಿಧ ಸಂಘ- ಸಂಸ್ಥೆಗಳು ಬಡಾವಣೆಗಳಲ್ಲಿ ರಾಮೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿವೆ.
ದುರ್ಗದಬೈಲ್, ಗಣೇಶಪೇಟೆ, ತುಳಜಾಭವಾನಿ ವೃತ್ತ, ಮೇದಾರ ಓಣಿ, ಗೋಪನಕೊಪ್ಪ ವೃತ್ತ, ದೇವಾಂಗಪೇಟೆ, ಮರಾಠಗಲ್ಲಿ, ವಿಜಯನಗರ, ಗೋಕುಲ ರಸ್ತೆ, ಕೇಶ್ವಾಪುರ ವೃತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ, ಬಣ್ಣದ ಪೇಪರ್‌ಗಳಿಂದ ಅಲಂಕರಿಸಲಾಗಿದೆ. ಕೆಲವೆಡೆ ಎಲ್‌ಇಡಿ ದೀಪಗಳನ್ನು ಇಟ್ಟು, ರಂಗು ಹೆಚ್ಚಿಸಲಾಗಿದೆ.