ಕಕ್ಕೇರಾ: ಪಟ್ಟಣದ ಸೋಮನಾಥ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜಾನುವಾರು ಜಾತ್ರೆ ಭರ್ಜರಿಯಾಗಿ ನಡೆಯುತ್ತಿದೆ. ಭಾನುವಾರದವರೆಗೆ ಜಾನುವಾರು ಜಾತ್ರೆ ಇರಲಿದೆ.
ರಾಯಚೂರು, ಕೊಪ್ಪಳ, ಬಾಲಗಕೋಟೆ, ವಿಜಯಪುರ, ಮಾನ್ವಿ, ಲಿಂಗಸುಗೂರು, ದೇವದುರ್ಗ, ತಾವರಗೇರಾ, ಕುಷ್ಟಗಿ, ತಾಳಿಕೋಟೆ, ಇಂಡಿ ಸೇರಿದಂತೆ ವಿವಿಧೆಡೆಯಿಂದ ರೈತಾಪಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ದನಗಳೊಂದಿಗೆ ಜಾತ್ರೆಗೆ ಆಗಮಿಸಿರುವುದು ಕಂಡುಬಂದಿತು.
ಜವಾರಿ ದೊಡ್ಡ ಪಡಿ, ಮೈಸೂರು ಕಿಲಾರಿ, ಕಿಲಾರಿ ತಳಿ, ದೇವಣಿ ಹೀಗೆ ನಾನಾ ತಳಿಗಳ ಎತ್ತುಗಳು ಇಲ್ಲಿ ಮಾರಾಟವಾಗುತ್ತಿವೆ. ಒಂದೊಂದು ಎತ್ತಿನ ಬೆಲೆ ಲಕ್ಷಕ್ಕೂ ಹೆಚ್ಚಿದೆ.
‘ಎತ್ತುಗಳ ಜೋಡಿಗೆ ₹2 ಲಕ್ಷಕ್ಕೂ ಹೆಚ್ಚಿನ ದರದಲ್ಲಿ ವ್ಯಾಪಾರವಾಗಿದ್ದು ಕಂಡುಬಂದಿದೆ’ ಎಂದು ಹಿರಿಯ ಜೀವಿ ದ್ಯಾವಪ್ಪ ಜಂಪಾ ತಿಳಿಸಿದರು.
‘ಎರಡು ಹಲ್ಲುಗಳುಳ್ಳ ಕಿಲಾರಿ ಎತ್ತುಗಳು ಎರಡೂವರೆ ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ’ ಎಂದು ಪ್ರಗತಿಪರ ರೈತರು ಹೇಳುತ್ತಾರೆ.
‘ಸೋಮನಾಥ ದೇವಾಲಯದ ಬಯಲು ಜಾಗ ಎತ್ತುಗಳ ಮಾರಾಟಕ್ಕೆ ಉತ್ತಮ ಸ್ಥಳವಾಗಿದ್ದು, ಜಾತ್ರೆಯಲ್ಲಿ ಎತ್ತುಗಳಿಗೆ ಉಪಯೋಗಿಸುವ ರಿಬ್ಬನ್, ವಿವಿಧ ಕಲಾಕೃತಿಗಳ ಗೆಜ್ಜೆಗಳು ಮಾರಾಟವಾಗುತ್ತಿವೆ’ ಎಂದು ಕಾಶೀನಾಥ ತಾಳಿಕೋಟಿತಿಳಿಸಿದರು.