ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ರಾಮ ಭಕ್ತರಲ್ಲಿ ಸಂಭ್ರಮ ಹೆಚ್ಚಾಗುತ್ತಿದೆ. ಇನ್ನು ರಾಮ ಮಂದಿರ ಉದ್ಘಾಟನೆ, ರಾಮನ ಬಂಟ ಹನುಮಂತನ ಜನ್ಮಸ್ಥಳದಲ್ಲಿ ಕೂಡಾ ಸಂಭ್ರಮ ಹೆಚ್ಚಿಸುತ್ತಿದೆ. ಹೌದು ರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ ಅಂಜನಾದ್ರಿಯಲ್ಲಿ ಕೂಡಾ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಹನುಮಂತನ ನಾಡಿನಿಂದ ಪ್ರಭು ಶ್ರೀರಾಮನಿಗೆ ಗೌರವ ಸೂಚಿಸಲು ಸಿದ್ದತೆ ಆರಂಭವಾಗಿವೆ.
ದಶಕಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಜನವರಿ 22 ರಂದು ಉದ್ಘಾಟನೆಯಾಗಲಿದೆ. ಇದು ದೇಶದ ಬಹುಸಂಖ್ಯಾತ ರಾಮ ಭಕ್ತರ ಸಂಭ್ರಮ ಹೆಚ್ಚಿಸಿದೆ. ಇನ್ನು ಅಯೋಧ್ಯೆಯ ರಾಮನಿಗೂ ನಮ್ಮದೆ ರಾಜ್ಯದ ಕೊಪ್ಪಳ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಯಾಕಂದ್ರೆ ಸೀತೆಯನ್ನು ಹುಡುಕಿ ಹೊರಟಿದ್ದ ರಾಮ, ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯಲ್ಲಿರುವ ಕಿಷ್ಕಿಂದೆ ಪ್ರದೇಶದಲ್ಲಿ ಇದ್ದ.
ಇಲ್ಲಿ ವಾಲಿಯನ್ನು ಹತ್ಯೆ ಮಾಡಿದ್ದ. ಇನ್ನು ಸೀತೆಯನ್ನು ಬಿಡಿಸಿಕೊಂಡು ಬರುವಲ್ಲಿ ರಾಮನಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದು ಕಿಷ್ಕಿಂದೆಯ ವಾನರ ಸೇನೆ ಮತ್ತು ಹನುಮಂತ. ಇದೆಲ್ಲವು ಕೂಡಾ ವಾಲ್ಮೀಕಿಯ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕೊಪ್ಪಳ ಜಿಲ್ಲೆಯ ಜನರಿಗೆ ಕೂಡಾ ಸಂತಸ ಹೆಚ್ಚಾಗುವಂತೆ ಮಾಡಿದೆ.
ಇನ್ನು ರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ, ರಾಮನ ಬಂಟ ಹನುಮಂತನ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಕೂಡಾ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ರಾಮ ಮಂದಿರ ಉದ್ಘಾಟನೆಯ ಸಂತಸವನ್ನು ಹೆಚ್ಚಿಸಲು ಹನುಮಾನ ಜನ್ಮಭೂಮಿ ಅಂಜನಾದ್ರಿ ಟ್ರಸ್ಟ್ ಮುಂದಾಗಿದೆ.
ಆ ಮೂಲಕ ಪ್ರಭು ಶ್ರೀರಾಮನಿಗೆ ವಿಶಿಷ್ಟ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಹೌದು ಜನವರಿ 21 ರಂದು ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 22 ರಂದು, ಅಂದ್ರೆ ರಾಮ ಮಂದಿರ ಉದ್ಘಾಟನೆಯ ದಿನ, ಮುಂಜಾನೆ ಕುಂಕುಮಾರ್ಚನೆ ಮತ್ತು 108 ಹನುಮಾನ್ ಚಾಲೀಸ್ ಪಠಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರ್ಚಕ ವಿದ್ಯಾವ್ಯಾಸ್ ಬಾಬಾ ತಿಳಿಸಿದ್ದಾರೆ.