ಮಂಗಳೂರು,: ಜನವರಿ 22ರಂದು ಅಯೋಧ್ಯೆ(Ayodhya)ಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಕ್ಷೇತ್ರದಲ್ಲಿದ್ದ ಬೆಳ್ಳಿ ಪೂಜಾ ಪರಿಕರಗಳನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade) ಅವರು ಪೇಜಾವರ ಶ್ರೀಗಳಿಗೆ ತಲುಪಿಸಲು ನೀಡಿದ್ದಾರೆ. ಜ. 22 ರ ಉದ್ಘಾಟನಾ ಸಮಾರಂಭಕ್ಕೆ ವಿವಿಐಪಿ ಅತಿಥಿಯಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ ನೀಡಲಾಗಿದೆ.
ಅಯೋಧ್ಯೆಗೆ ಏನಾದರೂ ಸಮರ್ಪಿಸಬೇಕು ಎನ್ನುವ ಆಸೆಯಿತ್ತು: ಡಾ.ಡಿ.ವೀರೇಂದ್ರ ಹೆಗ್ಗಡೆ
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಜ.22ರಂದು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವೆ. ಅಯೋಧ್ಯೆಗೆ ಏನಾದರೂ ಸಮರ್ಪಿಸಬೇಕು ಎನ್ನುವ ಆಸೆಯಿತ್ತು. ಹಾಗಾಗಿ ಕ್ಷೇತ್ರದಲ್ಲಿದ್ದ ಅನೇಕ ಪರಿಕರವನ್ನು ಅಯೋಧ್ಯೆಗೆ ರವಾನಿಸಿದ್ದೇವೆ. ಅಯೋಧ್ಯೆಯಲ್ಲಿ ಕೆಲಕಾಲ ಪೇಜಾವರಶ್ರೀಗಳು ಪೂಜೆ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತ ಶೈಲಿಯ ಪೂಜೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಯೋಧ್ಯೆಗೆ ಹಲವು ಪೂಜಾ ಪರಿಕರ ನೀಡಿದ್ದೇವೆ. ಆರತಿ ತಟ್ಟೆಗಳು, ನೆಲಾರತಿ, ನಾಗಾರತಿ, ಕೂರ್ಮಾರತಿ, ಕರ್ಪೂರಾರತಿ, ಶಂಖ, ಚಾಮರ, ಘಂಟೆ, ಕುಂಬಗಳನ್ನು ಅಯೋಧ್ಯೆಗೆ ರವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆ. ಜ.22ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯೆಗೆ ತೆರಳುತ್ತೇನೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ, ಬಾಲ ರಾಮನ ಪ್ರಾಣಪ್ರತಿಷ್ಠಾಪನೆಯ ಎರಡನೇ ದಿನದ ಪೂಜಾ ಕೈಂಕರ್ಯಗಳು ಪೂರ್ಣಗೊಂಡಿವೆ. ನಿನ್ನೆಯಷ್ಟೇ ಪ್ರಾಣಪ್ರತಿಷ್ಠಾಪನೆಯ ಪೂರ್ವಭಾವಿ ಶುಭ ಕಾರ್ಯಗಳು ಆರಂಭವಾಗಿದ್ದು, ಪ್ರಾಯಶ್ಚಿತ ಪೂಜೆ, ವಿಷ್ಣುಪೂಜೆ ನೆರವೇರಿಸಲಾಗಿತ್ತು. ಇವತ್ತು ಜಲಯಾತ್ರೆ ಸೇರಿ ವಿವಿಧ ಪೂಜೈ ಕೈಂಕರ್ಯ ನಡೆಸಲಾಗಿದೆ.
ರಾಮಮಂದಿರದ ಆವರಣಕ್ಕೆ ರಾಮಲಲ್ಲಾ ವಿಗ್ರಹ ತರಲಾಗಿದೆ. ಕ್ಯಾಂಟರ್‌ನಲ್ಲಿ ರಾಮಲಲ್ಲಾ ವಿಗ್ರಹವನ್ನ ಮೂರ್ತಿ ತಯಾರಿಕಾ ಸ್ಥಳದಿಂದ ಬಿಗಿ ಭದ್ರತೆಯಲ್ಲಿ ತರಲಾಗಿದೆ.