ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಮಮಂದಿರವೂ ಜೂಜಾಟದ ಕೇಂದ್ರವಾಗಬಾರದು ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದರು. ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಸಹಯೋಗದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ನಡೆದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮ್ಮಟ 2ನೇ ದಿನದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತರ ನಿರ್ಣಾಯಕ ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ನಮ್ಮ ಬುಡಕಟ್ಟು ಜನಾಂಗದವರು ದೇವರನ್ನು ಮೌಲ್ಯಮಾಪನಕ್ಕೆ ಒಳಪಡಿಸುವಂತೆ ನಾವು ಕೂಡ 2024ನೇಯ ಲೋಕಸಭೆಯ ಸಂಸತ್ ಸದಸ್ಯರನ್ನು ಮೌಲ್ಯಮಾಪನ ಮಾಡಿ ಆಯ್ಕೆ ಮಾಡಬೇಕು ಎಂದು ಹೇಳಿದರು. “ಛತ್ತೀಸ್ಗಡದಲ್ಲಿ ಆದಿವಾಸಿ ಜನಾಂಗದವರು ದೇವರುಗಳನ್ನೇ ಮೌಲ್ಯಮಾಪನ ಮಾಡುತ್ತಾರೆ.
ನಾವು ಮನುಷ್ಯರನ್ನು ಮೌಲ್ಯಮಾಪನ ಮಾಡುತ್ತಿಲ್ಲ. ಹೀಗಾಗಿ, ಮೌಲ್ಯಮಾಪನದ ಸತ್ವವನ್ನು ನಮ್ಮ ಪೂರ್ವಜರಿಂದ ಕಲಿಯಬೇಕಿದೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಎಚ್ಚರಗೊಂಡು ಈಗಲಾದರೂ ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ. ಇಂದರಿಂದ ಶೇ.
90ರಷ್ಟು ಅಸಮರ್ಥರು ಸಂಸತ್ ಭವನದಿಂದ ಹೊರಗೆ ಉಳಿಯಲಿದ್ದಾರೆ” ಎಂದು ತಿಳಿಸಿದರು, “ಇಂದಿನ ಜನಸ್ತೋಮ ಮಾಯದ ಬಲೆಯಲ್ಲಿ ಸಿಲುಕಿಕೊಂಡಿದೆ. ಬಿಡಿಸಿಕೊಳ್ಳಲಾಗದ ಮೀನಿನಂತೆ ಒದ್ದಾಡುತ್ತಿದ್ದೇವೆ. ಬಡವ – ಬಲ್ಲಿಗನ ಅಂತರ ಹೆಚ್ಚಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಉದ್ಯೋಗ, ಶಿಕ್ಷಣ, ಆರೋಗ್ಯವನ್ನು ಮಾನದಂಡವಾಗಿಸಿ ಈ ಮಾಲ್ಯಮಾಪನದ ಕೆಲಸ ಆಗಲೇ ಬೇಕಿದೆ” ಎಂದು ಹೇಳಿದರು.