ಬೆಂಗಳೂರು, ಜ.09: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ (PSI Recruitment Scam) ನಡೆದ ಹಿನ್ನೆಲೆ ರದ್ದಾಗಿದ್ದ ಪರೀಕ್ಷೆಯನ್ನು ಮತ್ತೆ ಬರೆಯಲು ದಿನಾಂಕ ನಿಗದಿಯಾಗಿದ್ದು ಜ.
23ರಂದು ಮರು ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ (KEA) ಹೊರಡಿಸಿದೆ. ಕಳೆದ ಡಿ.23ರಂದು ಬೆಂಗಳೂರಿನಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲು ಪ್ರಾಧಿಕಾರ ದಿನಾಂಕ ಪ್ರಕಟಿಸಿತ್ತು. ಆದರೆ, ಅಭ್ಯರ್ಥಿಗಳು ಪರೀಕ್ಷೆಗೆ ತಯಾರಾಗಲು ಹೆಚ್ಚಿನ ಕಾಲಾವಕಾಶ ನೀಡಲು ಪರೀಕ್ಷೆ ಮುಂದೂಡ ಬೇಕೆಂದು ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಸರ್ಕಾರಕ್ಕೆ ಮನವು ಮಾಡಿದ್ದರು. ಇದಕ್ಕೆ ಒಪ್ಪಿಗೆ ನೀಡಿದ್ದ ಸರ್ಕಾರ ಒಂದು ತಿಂಗಳ ಕಾಲ ಪರೀಕ್ಷೆಯನ್ನು ಮುಂದೂಡಿತ್ತು. ಸದ್ಯ ಈಗ ದಿನಾಂಕ ನಿಗದಿಯಾಗಿದ್ದು ಜ.23ರಂದು ಪಿಎಸ್‌ಐ ಮರು ಪರೀಕ್ಷೆ ನಡೆಯಲಿದೆ.
2021ರ ಅಕ್ಟೋಬರ್‌ನಲ್ಲಿ ಪೊಲೀಸ್ ಇಲಾಖೆ ನಡೆಸಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿತ್ತು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ ಇಡೀ ಪರೀಕ್ಷೆಯನ್ನೇ ರದ್ದುಪಡಿಸಿ ಮರು ಪರೀಕ್ಷೆಗೆ ಆದೇಶಿಸಿತ್ತು. ಇದನ್ನು ಕೆಲ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್ ನೇಮಕಾತಿ ಪರೀಕ್ಷೆ ರದ್ದುಪಡಿಸಿ ಹೊಸದಾಗಿ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ಆದೇಶಿಸಿತ್ತು. ಬಳಿಕ ಸರ್ಕಾರ ಮರು ಪರೀಕ್ಷೆಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಿತ್ತು. ಸದ್ಯ ಈಗ ಮರು ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಜ.23ರ ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್ -1 (50 ಅಂಕ) ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ಪೇಪರ್ -2ಕ್ಕೆ (150 ಅಂಕ) ಪರೀಕ್ಷೆ ನಡೆಯಲಿದೆ.