ಬೆಂಗಳೂರು, ಜ.8: ಅಯೋಧ್ಯೆಯ ರಾಮ ಮಂದಿರದ (Ayodhya Ram Mandir) ಆಹ್ವಾನದ ಮಂತ್ರಾಕ್ಷತೆಯನ್ನು ಅನ್ನಭಾಗ್ಯ ಅಕ್ಕಿಯಲ್ಲೇ ಕೊಡುತ್ತಿದ್ದಾರೆ ಎಂಬ ಡಿಸಿಎಂಡಿಕೆ ಶಿವಕುಮಾರ್(DK Shivakumar) ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi), ಕೊಡಲಾಗದ ಅನ್ನ ಭಾಗ್ಯದ ಅಕ್ಕಿಯದೇ ಅಕ್ಷತೆ ಎಂದು ತಿಳಿಯುವುದು ಭ್ರಮಾಲೋಕದಲ್ಲಿ ಇರುವವರ ನಾಟಕ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಜೋಶಿ, ‘ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರು ರಾಮ ಮಂದಿರ ಆಗಬಾರದೆಂದು ಪಣ ತೊಟ್ಟವರು, ಇವತ್ತು ಅಕ್ಷತೆ ಮಾಡುತ್ತಿರುವುದಕ್ಕೆ ಸಂತೋಷ ಪಡುತ್ತಿರುವುದು ಒಂದು ಸಂತೋಷವೇ. ಆದರೆ ಅವರು ಸಂತೋಷ ಪಡುತ್ತಿರುವ ಕಾರಣ ಮಾತ್ರ ವಿಚಿತ್ರ’ ಎಂದರು.
‘ಕೊಡಲಾಗದ ಅನ್ನ ಭಾಗ್ಯದ ಅಕ್ಕಿಯದೇ ಅಕ್ಷತೆ ಎಂದು ತಿಳಿಯುವುದು ಭ್ರಮಾಲೋಕದಲ್ಲಿ ಇರುವವರ ನಾಟಕ. ಕೊಡಲಾರದ ಅಕ್ಕಿಯಲ್ಲಿ ಅಕ್ಷತೆ ಆಗುತ್ತಿದೆ ಎಂದು ಪ್ರಭು ರಾಮನ ಅಕ್ಷತಾ ವಿಷಯದಲ್ಲೂ ಸುಳ್ಳು ಹೇಳುವ ಪಾಪಿಗಳು ನೀವು’ ಎಂದು ಡಿಕೆ ಶಿವಕುಮಾರ್ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಪ್ರಲ್ಹಾದ ಜೋಶಿ ಟ್ವೀಟ್
ರಾಮನ ಅಕ್ಷತೆ ಕಾಳಿನ ಬಗ್ಗೆಯೂ ಸುಳ್ಳು ಹೇಳಿದ್ದಾರೆ. ಈ ಹಿಂದಿನಿಂದಲೂ ರಾಮನ ಬಗ್ಗೆ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ರಾಮನೇ ಕಾಲ್ಪನಿಕ ಅಂತ ಹಿಂದೆ ಅಂದಿದ್ದರು. ಇವತ್ತು ಅವರು ಕೊಡಲಾರದ ಅಕ್ಕಿ ಮಂತ್ರಾಕ್ಷತೆ ಎಂದಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಹೇಳಿಕೆ ಕೊಟ್ಟಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ನಮ್ಮ ಮನೆಯಲ್ಲಿ ಶಿವ, ಹನುಮಂತನ ಫೋಟೋ ಇಟ್ಟು ಪೂಜೆ ಮಾಡುತ್ತೇವೆ. ನಮ್ಮ ಹೃದಯದಲ್ಲಿ ನಮ್ಮ ದೇವರುಗಳನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ. ಹೀಗಾಗಿ ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲೇ ಮಂತ್ರಾಕ್ಷತೆ ಮಾಡಿ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ ಎಂದಿದ್ದರು.
ಸುಳ್ಳಿನ ಸ್ಪರ್ಧೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್
ಶ್ರೀಕಾಂತ್ ಪೂಜಾರಿ ಮೇಲಿನ ಕೇಸ್ಗಳ ಬಗ್ಗೆಯೂ ಸುಳ್ಳು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸುಳ್ಳಿನ ಸ್ಪರ್ಧೆಯಲ್ಲಿದ್ದಾರೆ. ಇವರಿಗೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಅಮಾಯಕರು ಸಿಗುತ್ತಾರೆ. ಆದರೆ ಹುಬ್ಬಳ್ಳಿ ಪ್ರಕರಣದಲ್ಲಿ ಎಲ್ಲಾ ಕೇಸ್ ತೆರವಾದರೂ ಅಮಾಯಕರು ಎನ್ನಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ, ಅವರಿಗೆ ಕೇಂದ್ರ ಸಂಪುದಲ್ಲಿ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಲ್ಹಾದ ಜೋಶಿ, ಅದು ನನ್ನ ವ್ಯಾಪ್ತಿಯಲ್ಲಿ ಇಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.