ಬೆಂಗಳೂರು : ಕೆಆರ್‌ಎಸ್ ಆಣೆಕಟ್ಟಿಗೆ(KRS dam) ಹಾನಿಯಾದರೆ ಆಗುವ ಅನಾಹುತದ ಅರಿವಿದೆಯೇ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ(Justice prasanna B Varale) ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿದೆ.
ಕೆಆರ್‌ಎಸ್ ಸುತ್ತ ಗಣಿಗಾರಿಕೆ ವಿಚಾರವಾಗಿ ಜಿಲ್ಲಾಧಿಕಾರಿಗಳು ವಿಧಿಸಿದ್ದ ಷರತ್ತು ವಿರೋಧಿಸಿ ಗಣಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಕೆಆರ್‌ಎಸ್ ಡ್ಯಾಮ್ ಸುತ್ತ 20 ಕಿ.ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನ ನಿಷೇಧಿಸಿ ಆದೇಶ ಹೊರಡಿಸಿದೆ.
ಕೃಷ್ಣರಾಜ ಆಣೆಕಟ್ಟು ಈಗಾಗಲೇ ಸಂಕಷ್ಟದಲ್ಲಿದೆ ಹಲವು ಬಾರಿ ಡ್ಯಾಮ್ ಬಳಿ ದೊಡ್ಡ ಶಬ್ದ ಕೇಳಿ ಬಂದಿದೆ. ಆಣೆಕಟ್ಟಿಗೆ ಹಾನಿಯಾದರೆ ಆಗುವ ಅನಾಹುತದ ಅರಿವಿದೆಯೇ? ಡ್ಯಾಮ್‌ಗೆ ತೊಂದರೆಯಾದರೆ ಈಡೀ ರಾಜ್ಯಕ್ಕೆ ಆಪತ್ತು ಬರಲಿದೆ ಎಂದು ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಹೇಳಿದೆ. ಸರ್ಕಾರ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ ಹೀಗಾಗಿ ಗಣಿಗಾರಿಕೆ ಮಾಡುವಂತಿಲ್ಲ, ಆಣೆಕಟ್ಟು ನಿರ್ಮಾಣಕ್ಕೆ ಜನ ರಕ್ತ , ಬೆವರು ಸುರಿಸಿದ್ದಾರೆ ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ ಆದರೆ ಡ್ಯಾಮ್ ರಕ್ಷಣೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ . ಕೆಆರ್‌ಎಸ್‌ಗೆ ಧಕ್ಕೆ ಆಗುವ ಯಾವ ಚಟುವಟಿಕೆಗೂ ಅವಕಾಶ ಇಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ.