ವಿಜಯಪುರ: ಮಕರ ಸಂಕ್ರಮಣದಂದು (Makara Sankranti) ಬಹಳ ವಿಜೃಂಭಣೆಯಿಂದ ನಡೆಯುವ ಜಾತ್ರೆ ಎಂದರೆ ಅದು ಉತ್ತರ ಕರ್ನಾಟಕದ ವಿಜಯಪುರದಲ್ಲಿರುವ ಶ್ರೀ ಸಿದ್ದೇಶ್ವರ ಜಾತ್ರೆ(Shri Siddeshwara). ಸಾವಿರಾರು ಜನರು ಸೇರುವ ಈ ಜಾತ್ರೆಗೆ, ದೇವರಿಗೆ ತನ್ನದೇ ಆದ ವೈಶಿಷ್ಟ್ಯಯಿದೆ.
ಈ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಹಲವು ಹಿಂದೂಪರ ಸಂಘಟನೆಗಳು ಈ ಕುರಿತು ನಿನ್ನೆ ಬ್ಯಾನರ್ ಹಾಕಿದ್ದು ಸದ್ಯ ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಬ್ಯಾನರ್(Banner) ತೆರವುಗೊಳಿಸಿದ್ದಾರೆ.
ಅನ್ಯಕೋಮಿನವರಿಗೆ ಈ ಜಾತ್ರೆಯಲ್ಲಿ ಯಾವುದೇ ವ್ಯಾಪಾರ ವಹಿವಾಟಿಗೆ ಅನುಮತಿ ಇಲ್ಲ ಎಂದು ಹಿಂದೂ ಸಂಘಟನೆಗಳ ಒಕ್ಕೂಟವು ದೇವಸ್ಥಾನದ ಎದುರು ದೊಡ್ಡ ಬ್ಯಾನರ್‍ವೊಂದನ್ನು ಅಳವಡಿಸಿದ್ದರು. ಆದರೆ, ಸಿದ್ದೇಶ್ವರ ಸಂಸ್ಥೆಯ ಸಿಬ್ಬಂದಿ ಈ ಬ್ಯಾನರ್ ತೆರವಿಗೆ ಮುಂದಾದಾಗ ಶ್ರೀರಾಮ ಸೇನಾ ಮುಖಂಡ ನೀಲಕಂಠ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ನಿನ್ನೆ ತಡರಾತ್ರಿ ಪೊಲೀಸರ ಸಹಾಯದಿಂದ ಸಂಸ್ಥೆಯ ಸಿಬ್ಬಂದಿ ಬ್ಯಾನರ್‍ನ್ನು ತೆಗೆಸಿದ್ದಾರೆ.
ತೆರವುಗೊಳಿಸಿದ್ದ ಬ್ಯಾನರ್‍ನಲ್ಲಿ ದೇಶದ ಕಾನೂನಿಗೆ, ನ್ಯಾಯಾಲಯದ ತೀರ್ಪಿಗೆ ಗೌರವ ನೀಡದ, ಈ ನೆಲದ ಸಂಸ್ಕೃತಿಗೆ ಅವಮಾನ ಮಾಡುವ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ, ಗೋಮಾತೆಯನ್ನು ಕೊಂದು ತಿನ್ನುವ, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಮತಾಂಧರೊಟ್ಟಿಗೆ ಹಿಂದೂಗಳು ಯಾವುದೇ ವ್ಯಾಪಾರ ವಹಿವಾಟು ಮಾಡುವುದಿಲ್ಲ ಮತ್ತು ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬ್ಯಾನರ್‍ನಲ್ಲಿ ಬರೆಯಲಾಗಿತ್ತು.