ವಿಜಯಪುರ, (ಜನವರಿ, 08): ಈ ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಕೊರೋನಾ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಭ್ರಷ್ಟಾಚಾರ ಅಗಿದೆ ಎನ್ನುವ ಗಂಭೀರ ಆರೋಪ ಮಾಡಿದ ಬಳಿಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangpuda Patil Yatnal), ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ದಾ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆಯೂ ವಿವರಣೆ ನೀಡಿದ್ದಾರೆ.
ಇನ್ನು ಬಗ್ಗೆ ಇಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ದೆಹಲಿಯ ಭೇಟಿ ಫಲಪ್ರದವಾಗಿದೆ. ದೆಹಲಿಗೆ ಬರಲು ರಾಷ್ಟ್ರೀಯ ಅಧ್ಯಕ್ಷರಿಂದ ನನಗೆ ಕರೆ ಬಂದಿದ್ದ ಕಾರಣ ಹೋಗಿದ್ದೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿಗೂ ಮುನ್ನ ಅರುಣಸಿಂಗ್ ಹಾಗೂ ರಾಧಾಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡಲು ತಿಳಿಸಿದ್ದರು. ಅವರಿಬ್ಬರ ಬಳಿ ಮಾತನಾಡಿದ ಮಾಹಿತಿಯನ್ನು ತಿಳಿದುಕೊಂಡ ಬಳಿಕ ಅಮಿತ್ ಶಾ ಹಾಗೂ ನಡ್ಡಾ ಅವರನ್ನ ಭೇಟಿಯಾಗಿದ್ದು, 25 ನಿಮಿಷಗಳ ಕಾಲ ಸುದೀರ್ಘ ಮಾತುಕತೆ ನಡೆಯಿತು. ಈ ವೇಳೆ ಎಲ್ಲಾ ವಿಚಾರಗಳನ್ನ ಕೇಂದ್ರದ ನಾಯಕರ ಮುಂದೆ ಹೇಳಿದ್ದೇನೆ ಎಂದು ವಿವರಿಸಿದರು.