ಹಾವೇರಿ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ (DJ Halli, KG Halli Riots) ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಅಮಾಯಕರು ಎಂಬ ನಿರ್ಣಯಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎರಡು ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದವರು ಅಮಾಯಕರಾ? ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಅಂತಾರಾ ಎಂದು ಪ್ರಶ್ನಿಸಿದ್ದಾರೆ.
ಪೊಲೀಸರ ಕ್ರಮ ಸರಿ ಅಂತಾ ಕಾಂಗ್ರೆಸ್ನವರೇ ಒಪ್ಪಿದ್ದಾರೆ. ಈಗ ಸಂಪುಟದಲ್ಲಿ ವರದಿ ಒಪ್ಪಿ ಅಮಾಯಕರು ಇದ್ದಾರೆ ಅಂದರೆ ಹೇಗೆ? ಇದು ಕಾಂಗ್ರೆಸ್ನ ದ್ವಂದ್ವ ಧೋರಣೆ ಹಾಗೂ ಓಲೈಕೆ ರಾಜಕಾರಣವಾಗಿದೆ. ಕಾಂಗ್ರೆಸ್ನವರು ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣವನ್ನು ದುರ್ಬಲ ಮಾಡುತ್ತಿದ್ದಾರೆ. ಅಮಾಯಕರು ಎಂದು ತೀರ್ಮಾನ ಮಾಡುವವರು ಯಾರು? ಬಂಧಿತರು ಅಮಾಯಕರೋ ಅಥವಾ ಆರೋಪಿಗಳೋ ಎಂಬುದನ್ನು ಕೋರ್ಟ್ ತೀರ್ಮಾನ ಮಾಡಲಿ ಎಂದರು.
ಮತ್ತೊಂದು ಗೋಧ್ರಾ ಹತ್ಯಾಕಾಂಡ ಆಗದಂತೆ ನೋಡಿಕೊಳ್ಳಿ ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆಗೆ ಆಕ್ರೋಶ ಹೊರಹಾಕಿದ ಬೊಮ್ಮಾಯಿ, ಮೊದಲು ಬಿಕೆ ಹರಿಪ್ರಸಾದ್ಗೆ ಸಮನ್ಸ್ ಜಾರಿ ಮಾಡಲಿ. ಇದೇ ರೀತಿ ಬಿಜೆಪಿಯವರು ಮಾತನಾಡಿದ್ದರೆ ಸುಮ್ಮನೆ ಬಿಡುತ್ತಿದ್ದಿರಾ ಎಂದು ಬೊಮ್ಮಾಯಿ ಪ್ರಶ್ನಿಸಿದರು.