ಬೆಳಗಾವಿ: ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಿ ಬಾಬರ್ ಮಸೀದಿ ಎನ್ನುತ್ತಿದ್ದರು. ಈಗ ವಿಶ್ವದಲ್ಲಿ ಮುಸ್ಲಿಮರಿಗೆ ತಾಕತ್ತಿದ್ದರೆ ದೇಗುಲ ಕೆಡವಿ ಮಸೀದಿ (Mosque) ಕಟ್ಟಲಿ ನೋಡೋಣ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.
ಬೆಳಗಾವಿಯ ಉಚ್ಚಗಾವಿಯಲ್ಲಿ ನಡೆದ ಹಿಂದೂ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈಗ ಮುಸ್ಲಿಮರು ತಾಕತ್ತಿದ್ದರೆ ದೇಗುಲಗಳನ್ನು ಕೆಡವಿ ಮಸೀದಿ ಕಟ್ಟಲಿ ನೋಡೋಣ. ನಾನು ಹೀಗೆ ಯಾಕೆ ಹೇಳುತ್ತಿದ್ದೇನೆ ಎಂದರೆ, ಅಂದು ಹಿಂದೂ ಸಂಘಟನೆಗಳು ಇರಲಿಲ್ಲ. ಆದರೆ ಈಗ ಅಂದಿನ ಸ್ಥಿತಿ ಇಲ್ಲ. ಇನ್ನೊಂದು ವರ್ಷದಲ್ಲಿ ಮಥರಾ ಹಾಗೂ ಕಾಶಿ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಧ್ವಂಸಗೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಶಿಯಲ್ಲಿ ಅರ್ಧ ವಿಶ್ವನಾಥನ ದೇವಾಲಯ, ಇನ್ನು ಅರ್ಧ ಭಾಗದಲ್ಲಿ ಮಸೀದಿ ಹೇಗೆ ನಿರ್ಮಾಣವಾಯಿತು? ಮಂದಿರದಲ್ಲಿ ಹಿಂದೂಗಳ ಜೀವವಿದೆ ಎಂದು ಮುಸ್ಲಿಂ ದೊರೆಗಳಿಗೆ ಗೊತ್ತಿತ್ತು. ಮಂದಿರಗಳನ್ನು ಒಡೆದು ಹಾಕಿದರೆ ಭಾರತ ನಮ್ಮದಾಗುತ್ತದೆ ಎಂದು ಮುಸ್ಲಿಂ ದೊರೆಗಳು ಭಾವಿಸಿದ್ದರು. ಹೀಗಾಗಿಯೇ ಕಾಶಿ ವಿಶ್ವನಾಥ, ಶ್ರೀಕೃಷ್ಣನ ದೇವಾಲಯ ಒಡೆದು ಹಾಕಿದರು ಎಂದರು.
ರಾಮ ಮಂದಿರವನ್ನು ಅಲ್ಲೇ ಕಟ್ಟುತ್ತೇವೆ ಎಂದು ಹೇಳುತ್ತಿದ್ದೆವು. ಅದರಂತೆ ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಇನ್ನೆರಡು ದೇವಾಲಯಕ್ಕೆ ಕೋರ್ಟ್ ಆದೇಶಿಸಿದೆ. ಇನ್ನೊಂದು ವರ್ಷದಲ್ಲಿ ಮಥುರಾ ಹಾಗೂ ಕಾಶಿ ದೇಗುಲದ ಪಕ್ಕದಲ್ಲಿರುವ ಮಸೀದಿಯೂ ಧ್ವಂಸವಾಗುತ್ತದೆ. ಆ ಜಾಗದಲ್ಲಿ ದೇವಸ್ಥಾನ ಪೂರ್ಣವಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.