ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ರಾಮಮಂದಿರದ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶನಿವಾರ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ಕಾರ್ಯಕ್ಕೆ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ.
ಪಕ್ಷದ ಸಂಸದ ಶ್ರೀಕಾಂತ್ ಶಿಂಧೆ, ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಮಂತ್, ಪಕ್ಷದ ವಕ್ತಾರರಾದ ನರೇಶ್ ಮಾಸ್ಕೆ, ಆಶಿಶ್ ಕುಲಕರ್ಣಿ ಮತ್ತು ಪಕ್ಷದ ಕಾರ್ಯದರ್ಶಿ ಭಾವು ಚೌಧರಿ ಅವರನ್ನೊಳಗೊಂಡ ಪಕ್ಷದ ನಾಯಕರ ನಿಯೋಗವು ಶ್ರೀ ರಾಮ್ ಮಂದಿರ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿ ಮಾಡಿ 11 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದೆ ಎಂದು ಪಕ್ಷ ತಿಳಿಸಿದೆ. ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆ ನಡೆಯಲಿದೆ.