ಬೆಂಗಳೂರು, ಜನವರಿ 2: ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್ ಆಂಜನೇಯ (H Anjaneya) ಅವಿವೇಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಟೀಕಿಸಿದ್ದಾರೆ.
ಭಗವಾನ್ ರಾಮನನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೋಲಿಸಿ ಮಾತನಾಡಿದ್ದಕ್ಕೆ ಆಂಜನೇಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯತ್ನಾಳ್, ಆಂಜನೇಯ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪೂಜಾ ಕೈಂಕರ್ಯ ನೆರವೇರಿಸಲಿ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
‘ಇಂತಹ ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದ ಸಚಿವಾರಿಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ! ಆಂಜನೇಯಪ್ಪನವರ ಪೂಜ್ಯ ದೇವರಾದ ಸಿದ್ದರಾಮಯ್ಯನವರಿಗೆ ಅವರ ಮನೆಯಲ್ಲಿ ಸಕಲ ರೀತಿಯಲ್ಲಿ ಪೂಜಾ ಕೈಂ-ಕಾರ್ಯಗಳು ನಡೆಯಲಿ. ಹಿಂದೂಗಳ ಆರಾಧ್ಯ ದೈವ ಶ್ರೀ ರಾಮ ದೇವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಘನತೆಯಿಂದ, ಗೌರವದಿಂದ ವರ್ತಿಸಲಿ’ ಎಂದು ಎಕ್ಸ್ ಸಂದೇಶದಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ.
ಸೋಮವಾರ ಚಿತ್ರದುರ್ಗದಲ್ಲಿ ಮಾತನಾಡಿದ್ದ ಆಂಜನೇಯ, ಸಿಎಂ ಸಿದ್ದರಾಮಯ್ಯ ಅವರೇ ಒಬ್ಬ ರಾಮ, ಇನ್ನು ಅವರು ಆ ರಾಮನನ್ನು (ಅಯೋಧ್ಯೆಯ ರಾಮನ ಉದ್ದೇಶಿಸಿ) ಹೋಗಿ ಯಾಕೆ ಪೂಜಿಸಬೇಕು ಎಂದು ಪ್ರಶ್ನಿಸಿದ್ದರು. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಕುರಿತಾದ ಚರ್ಚೆಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆಯದಾಯಿತು ಎಂದು ಹೇಳಿದ್ದರು. ಇದಕ್ಕೆ ಯತ್ನಾಳ್ ತಿರುಗೇಟು ನೀಡಿದ್ದಾರೆ.