ಬೆಂಗಳೂರು: ನಿಗಮ, ಮಂಡಳಿಗಳಿಗೆ ನೇಮಕ ಸಂದರ್ಭದಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸಮಾನ ಅವಕಾಶ ಸಿಗಲಿದೆ. ಅದಕ್ಕಾಗಿ ಎಲ್ಲ ನಾಯಕರು ಕೂತು ಚರ್ಚೆ ಮಾಡುತ್ತೇವೆ. ಸಂಕ್ರಾಂತಿ ಹಬ್ಬದ ವೇಳೆಗೆ ನೇಮಕವಾಗುವ ನಿರೀಕ್ಷೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ಕುರಿತು ವ್ಯವಸ್ಥೆ ಮಾಡಲಾಗುವುದು. ಕೇಂದ್ರ ನಾಯಕರು ಕೂಡ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿದ್ದು, ಎಲ್ಲರ ಜತೆ ಚರ್ಚೆ ಮಾಡಬೇಕು ಎಂದರು.
ಜನವರಿಯಲ್ಲಿ ದಿನಕ್ಕೆ ಎರಡು ಅಥವಾ ಮೂರು ವಿಧಾನಸಭೆ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೆಹಲಿ ಹಾಗೂ ಬೇರೆ ಕಡೆ ಪ್ರವಾಸ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಿದ್ಧತೆಗೆ ಜ.10ರಂದು ಸಭೆ
ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಜ.10ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜತೆಗೆ ಸಭೆ ನಡೆಯಲಿದೆ. ಜ.4ರಂದು ದೆಹಲಿಯಲ್ಲಿ ಇದೇ ವಿಷಯವಾಗಿ ಸಭೆ ನಿಗದಿಯಾಗಿದ್ದು, ಕೆಲವು ಸಚಿವರು ವರದಿ ನೀಡಿದ್ದಾರೆ. ಅದರಂತೆಯೇ ಸಮೀಕ್ಷೆ ಮಾಡಬೇಕಿದ್ದು, ದೆಹಲಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಲಿದೆ ಎಂದರು.