ಚಿತ್ರದುರ್ಗ: ಪಾಳು ಮನೆಯಲ್ಲಿ ಪತ್ತೆಯಾಗಿದ್ದ 5 ಅಸ್ಥಿಪಂಜರಗಳನ್ನು (Skeleton) ಅವರ ಸಂಬಂಧಿಕರು ಹಿಂದೂ ರುದ್ರಭೂಮಿಯಲ್ಲಿ ಶನಿವಾರ ಹೂಳುವ ಮೂಲಕ ಅಂತ್ಯಕ್ರಿಯೆ ನಡೆಸಿದರು.
ಗುರುವಾರ ಚಿತ್ರದುರ್ಗದ ಕಾರಾಗೃಹ ರಸ್ತೆಯಲ್ಲಿ ಅಸ್ಥಿಪಂಜರ ಪತ್ತೆ ಆಗಿ ಜನರಲ್ಲಿ ಭಯ ಮೂಡಿಸಿತ್ತು.
ಎನ್.ಕೆ.ಜಗನ್ನಾಥ ರೆಡ್ಡಿ (85), ಪತ್ನಿ ಪ್ರೇಮಲೀಲಾ (74), ಪುತ್ರಿ ಎನ್.ಜೆ.ತ್ರಿವೇಣಿ (56), ಎನ್.ಜೆ. ಕೃಷ್ಣ (53), ಎನ್.ಜೆ.ನರೇಂದ್ರ (51) ಎನ್ನುವವರ ಅಸ್ಥಿಪಂಜರ ಎಂದು ಗುರುತಿಸಲಾಗಿತ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ಪತ್ತೆಯಾಗಿದ್ದ ಮೃತರೆಲ್ಲರೂ 2019ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಇದೀಗ ಆ ಅಸ್ಥಿಪಂಜರಗಳಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಶುಕ್ರವಾರ ಅವುಗಳನ್ನು ಬಸವೇಶ್ವರ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿತ್ತು. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ, ದೊಡ್ಡ ಸಿದ್ದವ್ವನಹಳ್ಳಿಯಲ್ಲಿರುವ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಸಂಪ್ರದಾಯದಂತೆ ಅಸ್ಥಿಪಂಜರಗಳಿಗೆ ಅಗ್ನಿ ಸ್ಪರ್ಶ ಮಾಡಲು ಸಂಬಂಧಿಕರು ನಿರ್ಧರಿಸಿದ್ದರು. ಆದರೆ ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೂ ಅಗ್ನಿಸ್ಪರ್ಶಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದರಿಂದ ಜೋಗಿಮಟ್ಟಿ ರಸ್ತೆಯ ವಿವೇಕಾನಂದ ನಗರ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಹೂಳಲಾಯಿತು