ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪದೇಪದೆ ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡುವಂತೆ ವರಿಷ್ಠರನ್ನು ಒತ್ತಾಯಿಸಲು ರಾಜ್ಯ ಬಿಜೆಪಿ ಪದಾಧಿಕಾರಿಗಳು ತೀರ್ವನಿಸಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಹೊಸ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡದಿದ್ದರೆ ಪಕ್ಷ ತೀವ್ರ ಮುಜುಗರಕ್ಕೆ ಸಿಲುಕುತ್ತದೆ. ಲೋಕಸಭಾ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಪದಾಧಿಕಾರಿಗಳು ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ನ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಏಜೆಂಟರಂತೆ ಅವರು ಮಾತನಾಡುತ್ತಿದ್ದಾರೆ. ಯಾವಾಗ ಸರ್ಕಾರಕ್ಕೆ ಹಿನ್ನಡೆಯಾಗುತ್ತದೆಯೋ ಆಗ ಯತ್ನಾಳ್ರನ್ನು ಪ್ರಚೋದಿಸಿ ಅವರಿಂದ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ಕೊಡಿಸಲಾಗುತ್ತಿದೆ. ಯತ್ನಾಳ್ ಹೇಳಿಕೆ ಕೊಡುತ್ತಿದ್ದಂತೆ ಇವರ ಕಡತಗಳು ಕ್ಲಿಯರ್ ಆಗುತ್ತವೆ ಎಂದು ಬಹುತೇಕ ಪದಾಧಿಕಾರಿಗಳು ಟೀಕಾಪ್ರಹಾರ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಬಾಯಿಗೆ ಬಂದಂತೆ ಯತ್ನಾಳ್ ಟೀಕಿಸುತ್ತಾರೆ. ಪಕ್ಷದ ನಾಯಕತ್ವ ವಹಿಸಿದವರನ್ನು ಹೀನಾಯವಾಗಿ ಮಾತನಾಡುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ತಾವೊಬ್ಬರೇ ಇರಬೇಕೆಂಬ ಉದ್ದೇಶದಿಂದ ಪಕ್ಷದ ಆರು ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ. ಈ ಎಲ್ಲ ಅಂಶಗಳನ್ನು ವರಿಷ್ಠರ ಗಮನಕ್ಕೆ ತರಬೇಕೆಂದು ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಯತ್ನಾಳ್ ನಡವಳಿಕೆ ಕುರಿತಂತೆ ಹೈಕಮಾಂಡ್ಗೆ ಎಲ್ಲ ಪದಾಧಿಕಾರಿಗಳು ಸೇರಿ ಪತ್ರ ಬರೆಯಬೇಕು. ಅದರಲ್ಲಿ ಅವರನ್ನು ಉಚ್ಚಾಟನೆ ಮಾಡುವಂತೆ ಒತ್ತಾಯಿಸಬೇಕು. ವಿಜಯೇಂದ್ರ ದೆಹಲಿಗೆ ಹೋದಾಗ ವರಿಷ್ಠರನ್ನು ಕಂಡು ಇಲ್ಲಿನ ಪರಿಸ್ಥಿತಿ ವಿವರಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಮುಂದಿನ ದೆಹಲಿ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡುವುದಾಗಿ ವಿಜಯೇಂದ್ರ ಪದಾಧಿಕಾರಿಗಳಿಗೆ ಭರವಸೆ ನೀಡಿದರೆಂದು ಮೂಲಗಳು ತಿಳಿಸಿವೆ.
28 ಸ್ಥಾನ ಗೆಲ್ಲುವ ಸವಾಲು: ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಾವೆಲ್ಲರೂ ಸವಾಲಾಗಿ ಸ್ವೀಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.