ಬೆಂಗಳೂರು, ಡಿಸೆಂಬರ್ 28: ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ (Siddaramaiah), ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರೇ ಆದರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಧರಣಿ ಮಾಡಿದ್ದಕ್ಕೆ ಕರವೇ ವಿರುದ್ಧ ಕ್ರಮ ಕೈಗೊಂಡಿಲ್ಲ. ಕಾನೂನು ಕೈಗೆತ್ತಿಕೊಂಡಿದ್ದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.
ಕನ್ನಡ ನಾಮಫಲಕ ಸಂಬಂದ ನಿಯಮ ಮಾಡಬೇಕೆಂದು ಚಿಂತನೆ ಮಾಡಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ನಾಮಫಲಕವೇ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಪಕ್ಷ ಉದಯವಾಗಿ 138 ವರ್ಷ ಪೂರ್ಣಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ಸ್ಥಾಪನೆಯಾಯಿತು. ದೇಶದ ಜನರ ಜೀವನ ಸುಧಾರಣೆಗಾಗಿ ಉದಯವಾದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರು. ಇದಕ್ಕೆ ಕಾಂಗ್ರೆಸ್ ಪಕ್ಷ ಕಾರಣ, ಬೇರೆ ಯಾವುದೇ ಪಕ್ಷ ಕಾರಣವಲ್ಲ. ಬಿಜೆಪಿಯ ಒಬ್ಬರಾದ್ರೂ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಬಿಜೆಪಿಗರು ದೇಶ ಭಕ್ತರು ಅಂತಾರೆ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರಾ? ಇದನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ಡೋಂಗಿ ರಾಜಕಾರಣವನ್ನು ಕಾಂಗ್ರೆಸ್ ಬಯಲು ಮಾಡಬೇಕು. ಆಧುನಿಕ ಭಾರತದ ಅಭಿವೃದ್ಧಿಗೆ ಮೊದಲ ಪ್ರಧಾನಿ ನೆಹರು ಅಡಿಪಾಯ ಹಾಕಿದ್ದನ್ನು ಮರೆಯಬಾರದು ಎಂದು ಸಿದ್ದರಾಮಯ್ಯ ಹೇಳಿದರು.