ಬೆಂಗಳೂರು: ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (kalladka prabhakar bhat) ವಿರುದ್ಧ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ (High Court) ಸೂಚಿಸಿದೆ.
ತಮ್ಮ ವಿರುದ್ಧ ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಕಲ್ಲಡ್ಕ ಪ್ರಭಾಕರ್ ಭಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಶ್ ರೈ ಅವರು, ಕಲ್ಲಡ್ಕ ಪ್ರಭಾಕರ್‌ಗೆ ತಾತ್ಕಾಲಿಕ ರಿಲೀಫ್ ನೀಡಿದ್ದಾರೆ. ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ.
ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಇದನ್ನು ರದ್ದುಗೊಳಿಸುವಂತೆ ಸೂಚಿಸಬೇಕೆಂದು ಹೈಕೋರ್ಟ್‌ಗೆ ಕಲ್ಲಡ್ಕ ಪ್ರಭಾಕರ್ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದರು.