ಬೆಂಗಳೂರು, (ಡಿಸೆಂಬರ್ 27): ಅಂಗಡಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ (Kannada) ಬಳಸುವಂತೆ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ( karnataka rakshana- Vedike) ಬೆಂಗಳೂರಿಲ್ಲಿಂದು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ಬೆಂಗಳೂರು (Bengaluru) ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್ ಬಳಿಯ ಟೋಲ್ ಪ್ಲಾಜಾದಿಂದ ಆರಂಭವಾಗುವ ರ‍್ಯಾಲಿ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಲ್ಲದೇ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಏರ್ಪೋರ್ಟ್ ರಸ್ತೆಯ ಡಿವೈಡರ್ ಬಳಿ ಸೈಡ್ ವಾಲ್ಗಳನ್ನು ಅವಳವಡಿಸಿದ್ದಾರೆ. ಪ್ರತಿಭಟನೆ ವೇಳೆ ಜನ ನೋಡುತ್ತಾ ಟ್ರಾಫಿಕ್ ಜಾಮ್ ಮಾಡುತ್ತಾರೆ ಎಂದು ಪೊಲೀಸರು ಸುಮಾರು 500 ಮೀಟರ್ ಗೂ ಅಧಿಕ ದೂರ ಸೈಡ್ ವಾಲ್ ಅಳವಡಿಕೆ ಮಾಡಿದ್ದಾರೆ.
500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್ ಬಳಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 1 ಎಸಿಪಿ, 6 ಇನ್ಸ್ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್ ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ರ‍್ಯಾಲಿಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದರೆ ಕಾರ್ಯಕರ್ತರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ 10 ಬಸ್ ವ್ಯವಸ್ಥೆ ಮಾಡಿಕೊಂಡಿಕೊಂಡಿದ್ದಾರೆ.