ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರೂ ಇನ್ನೂ ಲಕ್ಷಾಂತರ ಮಹಿಳೆಯರು ಯೋಜನೆಯ ಅನುಕೂಲ ಪಡೆಯಲು ಸಾಧ್ಯವಾಗಿಲ್ಲ. ಹಾಗೆಯೇ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಕೆಲ ತಾಂತ್ರಿಕ ಕಾರಣಗಳಿಂದ ಹಲವರ ಖಾತೆಗೆ ಮಾಸಿಕ 2000 ರೂ. ಸಹಾಯಧನ ತಲುಪಿಲ್ಲ.
ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಲು ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ.27 ರಿಂದ 29 ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ಆಯೋಜಿಸಲಾಗಿದೆ.
ಡಿ.27 ರಿಂದ 29 ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೂ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ವಿಶೇಷ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆಧಾರ್ ಜೋಡಣೆ,
ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ ಅಪ್ಡೇಟ್, ಹೊಸ ಬ್ಯಾಂಕ್ ಖಾತೆ ಆರಂಭ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ಅರ್ಜಿದಾರರು ತಮ್ಮ ಆಧಾರ್ ಕಾರ್ಡ್, ಪತಿಯ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಕೊಂಡೊಯ್ದಿರಬೇಕು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ನುಡಿದಂತೆ ನಡೆಯುತ್ತಿರುವ ನಮ್ಮ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಮತ್ತಷ್ಟು ಜನರಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಶೇಷ ಶಿಬಿರವನ್ನು ಆಯೋಜಿಸಿದೆ ಎಂದು ತಿಳಿಸಿದ್ದಾರೆ.