ನವದೆಹಲಿ, ಡಿಸೆಂಬರ್ 23: ಕರ್ನಾಟಕಕ್ಕೆ ಬರ ಪರಿಹಾರ (Karnataka drought relief fund) ನೀಡುವ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಇಂದು (ಶನಿವಾರ) ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆ ಇದೆ. ಈ ವಿಚಾರವಾಗಿ ಇತ್ತೀಚೆಗಷ್ಟೇ ನವದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸಿ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೈಸೂರಿನಲ್ಲಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ನೀಡುವ ಬಗ್ಗೆ ಅಮಿತ್ ಶಾ ಅವರು ಸಭೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ.
ಪ್ರಧಾನಿ ಮೋದಿ ಭೇಟಿ ವೇಳೆ, ರಾಜ್ಯಕ್ಕೆ ಬರ ಪರಿಹಾರ ಆದಷ್ಟು ಶೀಘ್ರದಲ್ಲಿ ನೀಡಬೇಕು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಭೆ ಕರೆಯುವಂತೆ ಸೂಚಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಪ್ರಧಾನಿ ಮೋದಿ, ಶೀಘ್ರದಲ್ಲೇ ಸಭೆ ಕರೆಯುವಂತೆ ಅಮಿತ್ ಶಾ ಅವರಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದರು. ಈ ವಿಚಾರವಾಗಿ ನಂತರ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.
18,177 ಕೋಟಿ ರೂಪಾಯಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿದೆ. ರಾಜ್ಯದ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟ ಆಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಪ್ರಧಾನಿ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.