ಬೆಳಗಾವಿ, (ಡಿಸೆಂಬರ್ 21): ಕರ್ನಾಟಕದಲ್ಲಿ ಮತ್ತೆ ಕೊರೋನಾ (Coronavirus) ಆತಂಕ ಶುರುವಾಗಿದ್ದು, ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ. ಇನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲೂ (Belagavi) ಸಹ ಕಟ್ಟುನಿಟ್ಟಿನ ಕ್ರಮಕ್ಕೆ ಇಲ್ಲಿನ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಇಂದು (ಡಿಸೆಂಬರ್ 21) ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ ನೇತೃತ್ವದಲ್ಲಿ ಕೋವಿಡ್ ಸಭೆ ನಡೆದಿದ್ದು. ನೆಗಡಿ, ಕೆಮ್ಮು, ಜ್ವರದ ಲಕ್ಷಣ ಇದ್ದವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಹಾಗೂ ಕೇರಳದ ಶಬರಿಮಲೆಗೆ ತೆರಳಿದವರಿಗೂ ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸುವ ಕುರಿತು ಚರ್ಚೆ ನಡೆದಿದ್ದು, ಡಿಸೆಂಬರ್ 23ರಿಂದ ಪ್ರತಿ ತಾಲೂಕಿನಲ್ಲಿ 5 ಸಾವಿರ ಕೋವಿಡ್ ತಪಾಸಣೆಗೆ ಸೂಚನೆ ನೀಡಲಾಗಿದೆ. ಪಿಹೆಚ್ಸಿ, ಸಿಹೆಚ್ಸಿ ತಾಲೂಕು ಆಸ್ಪತ್ರೆಯಲ್ಲಿ RTPCR ಟೆಸ್ಟ್ಗೆ ನಿರ್ಧರಿಸಲಾಗಿದೆ.