ಬೆಳಗಾವಿ: ಮಗ ಮದುವೆಯಾಗಿ ಯುವತಿಯನ್ನು ಮನೆಗೆ ಕರೆ ತಂದಿದ್ದಕ್ಕೆಯುವತಿಯ ಸಂಬಂಧಿಕರು ಯುವಕನ ತಂದೆಗೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಡಿಸೆಂಬರ್ 15ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಯುವಕ ಪುಣೆ ಮೂಲದ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಮನೆಗೆ ಬಂದಿದ್ದ. ಮನೆಗೆ ಬರುತ್ತಿದ್ದಂತೆ ಯುವತಿಯ ಕಡೆಯವರು ಯುವಕನನ್ನು ಹುಡುಕಿ ಮನೆಗೆ ಧಾವಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ತಂದೆಗೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜಯ್, ವಿಜಯ್, ನಿಖಿಲ್, ಚಂದಾ, ದೀಪಕ್, ವಿಜಯ್, ವಿಶಾಲ್ ಸದ್ದಾಂ ಎಂಬವರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಉದ್ಯಮಬಾಗ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಜೋಡಿಯೊಂದು ಪರಾರಿಯಾದ ಕಾರಣಕ್ಕೆ ಯುವಕನ ತಾಯಿ ಮೇಲೆ ಅಮಾನವೀಯ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣ ದೇಶದ ಗಮನ ಸೆಳೆದಿತ್ತು.
Laxmi News 24×7